Crime News: ಮಧ್ಯಪ್ರದೇಶದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಐವರು ಆರೋಪಿಗಳ ಬಂಧನ

|

Updated on: May 09, 2024 | 7:11 PM

ಮಧ್ಯಪ್ರದೇಶದಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಐವರು ಆರೋಪಿಗಳು ಇದೀಗ ಪೊಲೀಸರ ವಶವಾಗಿದ್ದಾರೆ. ಅಲ್ಲದೆ, ಅವರ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಈ ಕುರಿತು ಪೂರ್ತಿ ಮಾಹಿತಿ ಇಲ್ಲಿದೆ.

Crime News: ಮಧ್ಯಪ್ರದೇಶದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಐವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
Image Credit source: istock
Follow us on

ಶಾಹದೋಲ್: ಮಧ್ಯಪ್ರದೇಶದ ಶಾಹದೋಲ್ (Shahdol) ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ (Gang Rape). ಈ ಹಿನ್ನೆಲೆಯಲ್ಲಿ ಆ ಐವರನ್ನು ಬಂಧಿಸಲಾಗಿದ್ದು, ಅವರು ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಶಾಹದೋಲ್ ಜಿಲ್ಲಾಡಳಿತ ಕೆಡವಿದೆ. ಶಾಹದೋಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಿ. ಸಿ ಸಾಗರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಘಟನೆ ನಡೆದ 24 ಗಂಟೆಗಳ ಒಳಗೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಅತ್ಯಾಚಾರ ನಡೆಸಿ ಬಂಧನಕ್ಕೊಳಗಾದವರನ್ನು ಐಶ್ವರ್ಯ ನಿಧಿ ಗುಪ್ತಾ (36), ಸಲೀಂ ಖುರೇಷಿ (22), ಕೈಲಾಶ್ ಪಣಿಕಾ (29), ಸಲೀಂ (18) ಮತ್ತು ಅಫ್ಜಲ್ ಅನ್ಸಾರಿ (28) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?

ತನ್ನ ಗೆಳೆಯನ ಜೊತೆ 15 ವರ್ಷದ ಬಾಲಕಿ ಟ್ಯೂಷನ್ ತರಗತಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅರಣ್ಯ ಪ್ರದೇಶದ ಬಳಿ ಆರೋಪಿಗಳು ಅವರನ್ನು ತಡೆದಿದ್ದಾರೆ. ಅವರಲ್ಲಿ ಕೆಲವರು ಹುಡುಗನನ್ನು ಗಟ್ಟಿಯಾಗಿ ಹಿಡಿದಿದ್ದರೆ, ಇತರರು ಹುಡುಗಿಯನ್ನು ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ನಡೆಸುವಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಅವರು ಈ ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಅತ್ಯಾಚಾರ ನಡೆಸಿರುವ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೇ 6ರ ಸಂಜೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ಪಡೆದರು. ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸುವಾಗ ಸ್ಥಳೀಯ ಜನರನ್ನು ವಿಚಾರಿಸಿದಾಗ ಐವರು ಪುರುಷರು ಆ ಊರಿನಿಂದ ಕಾಣೆಯಾಗಿದ್ದಾರೆ ಎಂದು ಗೊತ್ತಾಯಿತು. ಅವರ ಮೇಲೆ ಅನುಮಾನಗೊಂಡ ಪೊಲೀಸರು ತಕ್ಷಣ ಕಾರ್ಯೋನ್ಮುಖರಾದರು.

ಇದನ್ನೂ ಓದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ, ಇಬ್ಬರನ್ನು ಹೊಡೆದು ಕೊಂದ ಜನ

ಆ ಐವರು ರೇವಾಗೆ ಹತ್ತಿರದ ಕಾಡಿನೊಳಗೆ ಓಡಿಹೋಗಿದ್ದರು, ಅಲ್ಲಿಂದ ಅವರನ್ನು ಬಂಧಿಸಲಾಯಿತು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ಕರೆದೊಯ್ದ ನಂತರ ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಲಾಯಿತು.

ಇದಾದ ಬಳಿಕ ಬುಧವಾರ, ಶಾಹದೋಲ್ ಜಿಲ್ಲಾಡಳಿತ ಮತ್ತು ಪುರಸಭೆಯ ಜಂಟಿ ತಂಡವು ಆರೋಪಿಗಳ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ನೆಲಸಮಗೊಳಿಸಿತು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ