ಚಿಕ್ಕಬಳ್ಳಾಪುರ, ಜ.14: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಂಧ್ರಪ್ರದೇಶ ಮೂಲದ ತನ್ನ ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆ (Murder) ಮಾಡಿ ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿ ತಲೆಮರೆಸಿಕೊಂಡಿದ್ದರು. ಆದರೆ ಆರೋಪಿಗಳು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬಂತೆ ಆರೋಪಿಯೊಬ್ಬನನ್ನು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪಾತಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ನೆರೆರಾಜ್ಯ ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದ. ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು.
ಮೃತನ ಸ್ನೇಹಿತ ಬಾಬುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣನನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ಕೊಂದು ಶವ ಸುಟ್ಟು ಹಾಕಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಕರ್ನಾಟಕದ ಪಾತಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: 5 ದಿನದಿಂದ ನಾಪತ್ತೆಯಾಗಿದ್ದ ಮಹಿಳೆ ದರ್ಗಾ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆ, ಕೊಲೆ ಆಗಿದ್ದೇಕೆ?
ಆಂಧ್ರದ ಪೊಲೀಸರು ಆರೋಪಿ ಬಾಬುವನ್ನು ವಶಕ್ಕೆ ಪಡೆದು ತನಿಖೆ ಆರಂಬಿಸುತ್ತಿರುವ ವಿಚಾರ ತಿಳಿದ ಮತ್ತೊಬ್ಬ ಆರೋಪಿ ಪ್ರಭಾಕರ್ ಪೊಲೀಸರ ತನಿಖೆಗೆ ಹೆದರಿ ಸ್ವಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೆಂಕಟರಮಣ ನಾಯ್ಕ, ಬಾಬು, ಪ್ರಭಾಕರ್ ಮೂವರು ಸ್ನೇಹಿರಾಗಿದ್ದರು. ಬಾಬು ಹಾಗೂ ವೆಂಕಟರಮಣ ನಾಯ್ಕ ಮಧ್ಯೆ ಜಮೀನು ವಿವಾದ ಇತ್ತು. ಈ ವಿಚಾರವಾಗಿ ವೆಂಕಟರಮಣ ನಾಯ್ಕ್ ಪದೆ ಪದೆ ಕ್ಯಾತೆ ತೆಗೆಯುತ್ತಿದ್ದನಂತೆ. ಇದರಿಂದ ಕುಪಿತನಾದ ಬಾಬು ವೆಂಕಟರಮಣನನ್ನು ಗಡಿನಾಡು ವಂಡಮಾನ್ ಬಳಿ ಕರೆತಂದು ಮದ್ಯಪಾನ ಮಾಡಿಸಿದ್ದಾರೆ. ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಆರೋಪಿ ಬಾಬು ಪೊಲೀಸರು ಮುಂದೆ ಬಾಯಿ ಬಿಟ್ಟಿದ್ದಾನೆ.
ಕೊಲೆ ಮಾಡಿದ ಸ್ಥಳ ಕರ್ನಾಟಕ ರಾಜ್ಯಕ್ಕೆ ಸೇರಿರುವ ಕಾರಣ ಆಂಧ್ರ ಪೊಲೀಸರು ಕೊಲೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ