ಡೇಟಿಂಗ್ ಆ್ಯಪ್ನಲ್ಲಿ ಪರಪಸ್ಪರ ಪರಿಚಯ ಮಾಡಿಕೊಂಡ ಯುವಕ ಮತ್ತು ಯುವತಿ ದಿನಗಳು ಕಳೆಯುತ್ತಿದ್ದಂತೆ ಪ್ರೀತಿಗೆ ಬಿದ್ದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಜೋಡಿ ಹಕ್ಕಿ, ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಅದೇನೋ ಗೊತ್ತಿಲ್ಲ, ಇಬ್ಬರು ಕೂಡಿ ಸುಖವಾಗಿ ಬಾಳು ನಡೆಸಬೇಕು ಎಂದು ಕನಸು ಕಂಡಿದ್ದ ಜೋಡಿ ಹಕ್ಕಿಯ ಸುತ್ತಲೂ ನಿಧಾನವಾಗಿ ಅನುಮಾನದ ಹುತ್ತ ಬೆಳೆದು ನಿಂತಿತು. ಆಕೆಗೆ ಈತನ ಮೇಲೆ, ಈತನಿಗೆ ಆಕೆಯ ಮೇಲೆ ಅನುಮಾನ. ಕೊನೆಯದಾಗಿ ನಿನ್ನನ್ನು ನೋಡಬೇಕು ಎಂದು ಪ್ರಿಯಕರನ ಜೊತೆ ಹೇಳಿಕೊಂಡಿದ್ದಕ್ಕೆ ಪ್ರಿಯಕರ ಓಡೋಡಿ ಬಂದಿದ್ದಾನೆ. ಈ ವೇಳೆ ಕಾರಿನಲ್ಲಿ ಎಂಟ್ರಿ ಕೊಟ್ಟ ಪ್ರಿಯತಮೆಯ ಗುಂಪೊಂದು ಆತನನ್ನು ಅಪಹರಿಸಿ ಹಲ್ಲೆ ನಡೆಸಿತು. ಈ ವಿಚಿತ್ರ ಪ್ರೇಮ್ ಕಹಾನಿ ನಡೆದಿದ್ದು ಬೆಂಗಳೂರು ನಗರದಲ್ಲಿ.
ಮಹದೇವಪ್ರಸಾದ್ ಮತ್ತು ಕ್ಲಾರಾ ಎಂಬ ಯುವಕ-ಯುವತಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ದಿನಗಳು ಉರುಳುತ್ತಿದ್ದಂತೆ ಇಬ್ಬರ ನಡುವಿನ ಸಲುಗೆ ಹೆಚ್ಚಾಗಿ ಸ್ನೇಹ ಸಂಬಂಧ ಪ್ರೀತಿಗೆ ಮರಳಿದೆ. ನಂತರ ಒಂದು ಹೆಜ್ಜೆ ಮುಂದಿಟ್ಟ ಜೋಡಿ ಹಕ್ಕಿ ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಹಾಗೋ ಹೀಗೋ ಆರಂಭದಲ್ಲಿ ಸುಖವಾಗಿ ಇದ್ದರು. ದಿನಗಳು ಉರುಳುತ್ತಿದ್ದಂತೆ ಇಬ್ಬರ ತಲೆಯಲ್ಲಿ ಅನುಮಾನ ಎಂಬ ಭೂತ ಹೊಕ್ಕಿತು. ಅದರಂತೆ ಕ್ಲಾರಾಗೆ, ಮಹದೇವಪ್ರಸಾದ್ಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ, ಇತ್ತ ಮಹದೇವಪ್ರಸಾದ್ಗೆ ಕ್ಲಾರಾಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ ಹುಟ್ಟುಕೊಂಡಿದೆ.
ಜೋಡಿ ಹಕ್ಕಿಯ ನಡುವೆ ವಿಲನ್ ಆಗಿ ಬಂದ ಅನುಮಾನವು ಅವರ ಸಂಬಂಧದಲ್ಲಿ ಬಿರುಕು ಉಂಟುಮಾಡಿತು. ಪರಸ್ಪರ ಇಬ್ಬರ ಮೇಲೆ ಅನುಮಾನ ಹುಟ್ಟಿಕೊಂಡ ಹಿನ್ನೆಲೆ ಕ್ಲಾರಾ ಮತ್ತು ಮಹದೇವಪ್ರಸಾದ್ ಲಿವಿಂಗ್ ಟುಗೆದರ್ ಸಂಬಂಧ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ ಕ್ಲಾರಾಗೆ ಮಾತ್ರ ಮಹದೇವಪ್ರಸಾದ್ ಮೇಲೆ ತೀವ್ರ ಕೋಪಗೊಂಡ ಹಿನ್ನೆಲೆ ತನ್ನ ಸಹಚರರೊಂದಿಗೆ ಸೇರಿಕೊಂಡು ಅಪಹರಿಸುವ ಪ್ಲಾನ್ ಅನ್ನು ಮಾಡಿಕೊಂಡಳು.
ಅದರಂತೆ, ಕಳೆದ 10 ದಿನಗಳ ಹಿಂದೆ ಕೊನೆಯ ಬಾರಿ ನಿನ್ನನ್ನು ನೋಡಬೇಕು ಎಂದು ಕ್ಲಾರಾ ತನ್ನ ಮನೆ ಬಳಿ ಮಹದೇವಪ್ರಸಾದ್ನನ್ನು ಕರೆಸಿಕೊಂಡಿದ್ದಾಳೆ. ಅದರಂತೆ 11.30ರ ಸುಮಾರಿಗೆ ಕ್ಲಾರಾ ಇದ್ದಲ್ಲಿಗೆ ಓಡೋಡಿ ಹೋಗಿದ್ದಾನೆ. ಈ ವೇಳೆ ಒಟ್ಟು ಎಂಟು ಮಂದಿಯ ತಂಡವೊಂದು ಸೇರಿಕೊಂಡು ಮಹದೇವಪ್ರಸಾದ್ನನ್ನು ಕಾರಿನಲ್ಲಿ ಅಪರಹಣ ಮಾಡಿದೆ. ಈ ತಂಡದಲ್ಲಿ ಕ್ಲಾರಾ ಕೂಡ ಒಬ್ಬಳು. ಮಹದೇವಪ್ರಸಾದ್ನನ್ನು ಅಪಹರಿಸಿ ಹಲ್ಲೆ ನಡೆಸಿದ ಗುಂಪು ಆತನನ್ನು ವಾಪಸ್ಸು ಮನೆಗೆ ತಂದು ಬಿಟ್ಟು ಹೋಗಿದೆ.
ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಎಂದು ಮಂದಿಯನ್ನು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 am, Sat, 27 August 22