ಮಂಗಳೂರು, ಡಿ.12: ಬೆಳಗಾವಿ ಸುವರ್ಣ ಸೌಧದಲ್ಲಿರುವ ವೀರ ಸಾವರ್ಕರ್ (Veer Savarkar) ಫೋಟೋ ತೆರವು ವಿಚಾರವಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ (UT Khader) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಎಸ್ಡಿಪಿಐ ಮುಖಂಡನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಿಯಾಜ್ ಕಡಂಬು ಬಂಧಿತ ಆರೋಪಿಯಾಗಿದ್ದಾನೆ. ಸುವರ್ಣ ಸೌಧದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಕಿದ್ದ ವೀರ ಸಾವರ್ಕರ್ ಫೋಟೋ ತೆರವು ಮಾಡುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಸ್ಪೀಕರ್ ಯುಟಿ ಖಾದರ್, ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದಕ್ಕೆ ವಿರುದ್ಧವಾಗಿ ಫೇಸ್ ಬುಕ್ನಲ್ಲಿ ಖಾದರ್ ವಿರುದ್ಧ ರಿಯಾಜ್ ಪೋಸ್ಟ್ ಹಾಕಿದ್ದನು. “ಇಷ್ಟೇ… ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಈ ವ್ಯಕ್ತಿಯಿಂದ ಆರ್ಎಸ್ಎಸ್ ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ” ಎಂದು ಬರೆದಿದ್ದನು.
ಇದನ್ನೂ ಓದಿ: ಸಾವರ್ಕರ್ ಫೋಟೋ ವಿವಾದ: ಸ್ಪೀಕರ್ ಯುಟಿ ಖಾದರ್ ನಿಲುವಿಗೆ ಪ್ರಲ್ಹಾದ್ ಜೋಶಿ ಅಭಿನಂದನೆ
ಅಲ್ಲದೆ, “ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ ಎಸ್ಡಿಪಿಐ ಯಾಕೆ ಒಬ್ಬ ಮುಸ್ಲಿಂ ಶಾಸಕನ ವಿರುದ್ಧ ಸ್ಪರ್ಧೆ ಮಾಡುವುದು ಅಂತ. ನೋಡಿ ಉತ್ತರ ಸ್ಪಷ್ಟವಿದೆ. ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ RSS ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ ಎಂದಿದ್ದಾನೆ.
“ಎಂದಾದರೂ ಒಂದು ದಿನ SDPI ಅದೊರಳಗೆ ಲಗ್ಗೆ ಇಟ್ಟರೆ, ಕಿತ್ತು ಬಿಸಾಕಿಯೇ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡ. ಈ ಸಭಾಧ್ಯಕ್ಷರಿಗೆ ಚಾಲೆಂಜ್, ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ” ಎಂದು ಖಾದರ್ ವಿರುದ್ಧ ಪೋಸ್ಟ್ ಮಾಡಿದ್ದನು. ಸದ್ಯ ಮಂಗಳೂರಿನ ಉರ್ವ ಠಾಣೆಯಲ್ಲಿ ಆರೋಪಿ ರಿಯಾಜ್ನನ್ನು ವಿಚಾರಣೆ ನಡೆಸಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ