ರವಿವಾರ ಬೆಳಗಿನ ಜಾವ ನಾಲ್ವರು ಅಪರಿಚಿತರು ಇಂಗ್ಲೆಂಡಿನ ಬೌರ್ನೆಮೌತ್ ನ (Bournemouth) ವೂಟನ್ ಗಾರ್ಡನ್ಸ್ ನಲ್ಲಿನ ಮನೆಯೊಂದರಲ್ಲಿ ವಾಸವಾವಿರುವ ಯುವತಿಯ ಮನೆಯೊಂದಕ್ಕೆ ನುಗ್ಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (gangrape) ನಡೆಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರೇಪಿಸ್ಟ್ ಗಳಿಗಾಗಿ (rapist) ಹುಡುಕಾಟ ಆರಂಭಿಸಿದ್ದಾರೆ.
ಬೆಳಗಿನ ಜಾವ ಸುಮಾರು 3 ಗಂಟೆಗೆ ಯುವತಿಯು ಹೆಚ್ಚು ಕಡಿಮೆ ಅರ್ಧಗಂಟೆಯವರೆಗೆ ‘ಚೀರುತ್ತಿದ್ದಿದ್ದು ಮತ್ತು ಜೋರಾಗಿ ಅಳುತ್ತಿದ್ದ ಸದ್ದು ಕೇಳಿಸಿಕೊಂಡೆ,’ ಎಂದು ಸಂತ್ರಸ್ತೆಯ ನೆರೆಹೊರೆಯವರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಯುವತಿಯ ಮೇಲೆ ಅತ್ಯಾಚಾರ ನಡೆಸಿದವರು ನಾಲ್ಕು ಜನ ಟರ್ಕಿ ಮೂಲದವರು ಮತ್ತು ಅವರೆಲ್ಲ ಕಪ್ಪು ವರ್ಣದ ಬಟ್ಟೆ ಧರಿಸಿದ್ದರು ಹಾಗೂ ಕಪ್ಪು ಗಡ್ಡಧಾರಿಗಾಳಗಿದ್ದರು ಅಂತ ಹೇಳಲಾಗಿದೆ.
ಹಳೆಯ ಕ್ರೈಸ್ಟ್ ಚರ್ಚ್ ರಸ್ತೆಯ ಮತ್ತೊಂದು ಭಾಗದಲ್ಲಿ ನಡೆದ ಅಪರಾಧ ಸ್ಥಳಕ್ಕೆ ಪೊಲೀಸರು ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭಾಗವು ನಗರದ ನೈಟ್ ಲೈಫ್ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ.
ವಿಶೇಷ ತರಬೇತಿ ಹೊಂದಿರುವ ಪೊಲೀಸ್ ಅಧಿಕಾರಿಗಳಿಂದ ಸಂತ್ರಸ್ತೆಗೆ ರಕ್ಷಣೆ ಒದಗಿಸಲಾಗಿದೆ ಮತ್ತು ಆಕೆಯ ಮನೆಗೆ ಕೆಲದಿನಗಳ ಮಟ್ಟಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ.
ನೆರೆಹೊರೆಯ ಮತ್ತೊಬ್ಬರು, ‘ನಾನು ನಿದ್ರೆಯಲ್ಲಿದ್ದೆ, ಮಲಗುವಾಗ ನಾನು ಬೆಡ್ ರೂಮಿನ ಕಿಟಕಿಯನ್ನು ಯಾವಾಗಲೂ ತೆರೆದಿಟ್ಟಿರುತ್ತೇನೆ. ಆ ಯುವತಿ ಜೋರಾಗಿ ಸುಮಾರು ಅರ್ಧಗಂಟೆಯವರೆಗೆ ಅರಚುತ್ತಿದ್ದಳು. ಒಬ್ಬ ಪುರುಷನ ಧ್ವನಿಯನ್ನೂ ನಾನು ಕೇಳಿಸಿಕೊಂಡೆ,’ ಅಂತ ಹೇಳಿದ್ದಾರೆ.
ಈ ಆಘಾತಕಾರಿ ಘಟನೆಯು ಕರಾವಳಿ ನಗರರದಲ್ಲಿ ನಡೆಯುತ್ತಿರುವ ಸರಣಿ ರೇಪ್ ಪ್ರಕರಣಗಳಲ್ಲಿ ಒಂದಾಗಿದೆ.
ಅಕ್ಟೋಬರ್ 20 ರಂದು ಬಾರ್ನೆಮೌತ್ ನ ಹಾರ್ಸ್ ಶೂ ಕಾಮನ್ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ವೂಟನ್ ಗಾರ್ಡನ್ಸ್ ನಿಂದ ಈ ಪ್ರದೇಶವು ಕೂಗಳತೆಯ ಅಂತರದಲ್ಲಿದೆ.
ಅಕ್ಟೋಬರ್ 21ರಂದು ಕ್ರೈಸ್ಟ್ ಚರ್ಚ್ ಗೆ ಹತ್ತಿರದ ಸಬ್ ವೇಯಲ್ಲಿ ಮಹಿಳೆಯೊಬ್ಬರು ತಮಗೆ ಸಾಯಂಕಾಲವಷ್ಟೇ ಪರಿಚಯವಾಗಿದ್ದ ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೊಳಗಾಗಿದ್ದರು.
ಬೌರ್ನೆಮೌತ್ ಸಿಐಡಿಯ ಪತ್ತೇದಾರಿ ಇನ್ಸ್ ಪೆಕ್ಟರ್ ಆಗಿರುವ ಕೇಟಿ ಸ್ಟಾರ್ಕಿ ಅವರು, ‘ನಮ್ಮ ಪತ್ತೇದಾರಿ ದಳದ ಅಧಿಕಾರಿಗಳು, ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ. ಆ ಪ್ರದೇಶದ ಮೇಲೆ ಅವರು ಹಗಲು ರಾತ್ರಿ ನಿಗಾ ಇಟ್ಟಿದ್ದಾರೆ,’ ಎಂದು ಹೇಳಿದ್ದಾರೆ.
‘ಸದರಿ ಪ್ರದೇಶದಲ್ಲಿ ಯಾರಾದರೂ ಅಸಜಹಜವೆನಿಸುವಂಥದ್ದು ಕಂಡಿದ್ದರೆ, ಸಂಶಯಾಸ್ಪದ ಚಟುವಟಿಕೆಯೇನಾದರೂ ಗಮನಕ್ಕೆ ಬಂದಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ನಮ್ಮನ್ನು ಸಂಪರ್ಕಿಸಬೇಕೆಂದು ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ,’ ಎಂದು ಅವರು ಹೇಳಿದ್ದಾರೆ.
‘ಹಾಗೆಯೇ, ಮನೆಗಳ ಮುಂದೆ ಸಿಸಿಟಿವಿ ಅಳವಡಿಸಿಕೊಂಡಿರುವವರು ಒಮ್ಮೆ ಡ್ಯಾಶ್ ಕ್ಯಾಮ್ ಫುಟೇಜ್ ಗಳನ್ನು ಪರಿಶೀಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಸಂಶಯಾಸ್ಪದ ಅನಿಸುವಂಥದ್ದು ನಮಗೆ ತಿಳಿಸಿದರೆ ತನಿಖೆಗೆ ಅದು ನೆರವಾಗುತ್ತದೆ,’ ಅಂತ ಅವರು ಹೇಳಿದ್ದಾರೆ.
’ಈ ಘಟನೆಗಳು ನಿಸ್ಸಂದೆಹವಾಗಿ ಜನರಲ್ಲಿ ಕಳವಳವನ್ನು ಸೃಷ್ಟಿಸಿವೆ ಅಂತ ನಮಗೆ ಗೊತ್ತು. ಅದರೆ ಸದರಿ ಪ್ರದೇಶದಲ್ಲಿ ಮತ್ತು ಸೂಕ್ಷ್ಮವೆನಿಸುವ ಇತರ ಪ್ರದೇಶಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಿದ್ದೇವೆ ಅಂತ ನಿಮಗೆ ಆಶ್ವಾಸನೆ ನೀಡುತ್ತೇನೆ. ಸಾರ್ವಜನಿಕರಿಗೆ ಯಾವುದಾದರು ಸಮಸ್ಯೆ ಎದುರಾದರೆ ಅವರು ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಎಂದು ವಿನಂತಿಸಿಕೊಳ್ಳುತ್ತೇನೆ,’ ಎಂದು ಕೇಟೀ ಸ್ಟಾರ್ಕಿ ಹೇಳಿದ್ದಾರೆ.