ಗದಗ: ಮದುವೆಯಾದ ನಾಲ್ಕೈದು ವರ್ಷ ಚೆನ್ನಾಗಿಯೇ ಸಂಸಾರ ಸಾಗಿದ ನಂತರ ಪತಿಯ ತಲೆಯಲ್ಲಿ ಪತ್ನಿಯ ಬಗ್ಗೆ ಅನುಮಾನದ ಹುತ್ತ ಬೆಳೆದಿದೆ. ಈ ವಿಚಾರದಲ್ಲಿ ದಂಪತಿಗಳ ನಡುವೆ ಜಗಳವೂ ನಡೆಯುತ್ತಿತ್ತು. ಅದೊಂದು ರಾತ್ರಿಯಲ್ಲೂ ದಂಪತಿ ಜಗಳ ಮಾಡಿ ಮಲಗಿದ್ದಾರೆ. ಆದರೆ ಪತಿಯ ಕೋಪ ಮಾತ್ರ ತಣ್ಣಗಾಗಲಿಲ್ಲ. ಜಗಳ ನಡೆಯುತ್ತದೆ ಎಂದು ಮೊದಲೇ ಅರಿತಿದ್ದ ಪತಿ ಚಾಕುವನ್ನು ಕೂಡ ತಂದಿದ್ದನು. ಅದರಂತೆ ಜಗಳದ ನಂತರ ಪತ್ನಿ ಮಲಗಿದ್ದಾಗ ಚಾಕು ಕೈಗೆತ್ತಿಕೊಂಡ ಪಾಪಿ ಪತಿ ಆಕೆಯ ಹೊಟ್ಟೆಗೆ ಇರಿದು ಕೊಂದುಬಿಟ್ಟಿದ್ದಾನೆ. ಈ ಕ್ರೂರ ಘಟನೆ ನಡೆದಿದ್ದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಂಪೂರ ಗ್ರಾಮದಲ್ಲಿ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರಾಜಪ್ಪ ಎಂಬಾತ ಏಳು ವರ್ಷಗಳ ಹಿಂದೆ ಶಾಂತವ್ವ ಎಂಬವರನ್ನು ಮದುವೆಯಾಗಿದ್ದರು. ಸಂಸಾರ ಸುಂದರವಾಗಿಯೇ ಸಾಗುತ್ತಿತ್ತು. ಆದರೆ ಬಳಿಕ ರಾಜಪ್ಪನಿಗೆ ಪತ್ನಿ ಮೇಲೆ ಅನುಮಾನ ಹುಟ್ಟಿರುವುದು ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಗಣೇಶ ಹಬ್ಬಕ್ಕೂ ಮೊದಲು ಇಬ್ಬರ ನಡುವೆ ಜಗಳ ನಡೆದಿದ್ದು, ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಿದ್ದನು. ಇದರಿಂದ ಬೇಸತ್ತ ಶಾಂತವ್ವ ತವರು ಸೇರಿದ್ದಾಳೆ. ಹೀಗೆ ಹೋದಾಕೆಯನ್ನು ಮರಳಿ ಕರೆತರಲು ಗದಗ ಜಿಲ್ಲೆಯ ಕದಂಪೂರ ಗ್ರಾಮಕ್ಕೆ ಅಲೆದಾಡಿದ್ದಾನೆ. ಒಂದೇ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಪತ್ನಿ ಮೆನೆಗೆ ಬಂದು ಮನವೋಲಿಸುವ ಪ್ರಯತ್ನ ಮಾಡಿದ್ದಾನೆ.
ಆದರೆ, ಅಕ್ಟೋಬರ್ 8 ರಂದು ರಾಜಪ್ಪ ಪಕ್ಕಾ ಪ್ಲಾನ್ ಮಾಡಿಕೊಂಡು ಹೆಂಡತಿ ಮನಗೆ ಬಂದಿದ್ದಾನೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬಂತೆ ಪ್ರೀತಿಯ ನಾಟಕವಾಡಿ ಹೆಂಡತಿ ಮನೆಯಲ್ಲಿ ಊಟ ಮಾಡಿ ಬೆಡ್ರೂಮ್ನಲ್ಲಿ ಆಕೆಯೊಂದಿಗೆ ಮಲಗಿದ್ದಾನೆ. ಇಷ್ಟೆಲ್ಲಾ ಆದರೂ ಅಂದು ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಎಲ್ಲವೂ ಮುಗಿಯಿತು ಎಂದು ಭಾವಿಸಿ ಶಾಂತವ್ವ ಮಲಗಿದ್ದಾಳೆ. ಈ ವೇಳೆ ರಾಜಪ್ಪ ಮಲಗಿದ್ದ ಪತ್ನಿಯ ಹೊಟ್ಟೆಗೆ ಚಾಕೂ ಇರಿದು ಕೊಂದು ಹಾಕಿದ್ದಾನೆ.
ಸುಳಿವು ಸಿಗದಂತೆ ಪತಿ ಎಸ್ಕೇಪ್, ಪೊಲೀಸರಿಗೆ ತಲೆನೋವು
ಕೊಲೆಯ ಬಳಿಕ ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ರಾಜಪ್ಪ ಪರಾರಿಯಾಗಿದ್ದ. ಮೊಬೈಲ್ ತನ್ನ ಬಳಿ ಇದ್ದರೆ ಪೊಲೀಸರು ಹುಡುಕಿಕೊಂಡು ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ಮೊಬೈಲ್ ಕೂಡ ಬಿಟ್ಟು ಹೋಗಿದ್ದ. ಹೀಗಾಗಿ ಪ್ರಕರಣವನ್ನು ಬೇಧಿಸುವುದು ಮುಂಡರಗಿ ಪೊಲೀಸರಿಗೆ ಸವಾಲಾಗಿತ್ತು. ಅದಾಗ್ಯೂ ಆರೋಪಿಯ ಬಂಧನಕ್ಕೆ ಎಸ್ಪಿ ಶಿವಪ್ರಕಾಶ್, ಡಿವೈಎಸ್ಪಿ ಏಗನಗೌಡರ, ಸಿಪಿಐ ಹಳ್ಳಿ ನೇತೃತ್ವದ ಎರಡು ತಂಡ ರಚಿಸಲಾಯಿತು.
ಗೆಟಪ್ ಚೇಂಜ್ ಮಾಡಿದ ಆರೋಪಿ
ಕೊಲೆಗಾರ ರಾಜಪ್ಪ ಪೊಲೀಸರ ಕೈಗೆ ಸಿಗಬಾರದೆಂದು ಧರ್ಮಸ್ಥಳಕ್ಕೆ ಹೋಗಿ ತಲೆ ಬೋಳಿಸಿಕೊಂಡು ಗೆಟಪ್ ಬದಲಾಯಿಸಿಕೊಂಡು ದಿಕ್ಕುತಪ್ಪಿಸುತ್ತಿದ್ದನು. ಅದಾಗ್ಯೂ ಮುಂಡರಗಿ ಪೊಲೀಸರು ಸಿಕ್ಕಿದ ಸಣ್ಣ ಸಾಕ್ಷಿಯ ಜಾಡು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಹಂತಕ ಶಿವಮೊಗ್ಗಕ್ಕೆ ಪರಾರಿಯಾದನು. ಈ ವಿಚಾರ ತಿಳಿದ ಪೊಲೀಸರು ಶಿವಮೊಗ್ಗ ಪೊಲೀಸರಿಗೆ ಮಾಹಿತಿ ತಲುಪಿಸುತ್ತಾರೆ. ಹೀಗೆ ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿದ ಪೊಲೀಸರು ಕೊನೆಗೂ ರಾಜಪ್ಪನನ್ನು ಪತ್ತೆಹಚ್ಚುತ್ತಾರೆ.
ಹೇಗಿತ್ತು 50 ನಿಮಿಷದ ಕಾರ್ಯಾಚರಣೆ?
ಆರು ಜನ ಪೊಲೀಸರ ತಂಡ ಶಿವಮೊಗ್ಗ ನಗರಕ್ಕೆ ಎಂಟ್ರಿ ಕೊಟ್ಟು ಸತತ 50 ನಿಮಿಷ ಕಾನ್ಫರೆನ್ಸ್ ಕಾಲ್ ಮೂಲಕ ಹಂತಕನ ಚಲನವಲನ ಮೇಲೆ ನಗಾ ಇರಿಸಿದ್ದಾರೆ. ಈ ಜಿಲ್ಲೆಯಿಂದಲೂ ಬೇರೊಂದು ಕಡೆಗೆ ಹೋಗಲು ಸಜ್ಜಾದ ಹಂತಕ ಬಸ್ನಲ್ಲಿ ಕುಳಿತಿದ್ದನು. ಬಸ್ ಹೊರಡುವ ಮುನ್ನವೇ ನಿಲ್ದಾಣಕ್ಕೆ ಬಂದ ಪೊಲೀಸರು ರಾಜಪ್ಪನನ್ನು ಬಂಧಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Thu, 20 October 22