ಗದಗ, ಮಾ.14: ಮುಂದೆವರೆಯುತ್ತಿರುವ ದಿನಮಾನದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅದರಂತೆ ಇದೀಗ ಹಣ ಹಂಚಿಕೆ ವಿಚಾರಕ್ಕೆ ಗಲಾಟೆಯಾಗಿ ತಂದೆಯನ್ನೇ ಮಕ್ಕಳು ಕೊಲೆ ಮಾಡಿರುವ ಧಾರುಣ ಘಟನೆ ಗದಗ(Gadag) ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಕುಂಡಿ ಗ್ರಾಮದ ವಿವೇಕಾನಂದ ಕರಿಯಲ್ಲಪ್ಪನವರ್(52) ಮೃತ ರ್ದುದೈವಿ. ಮೊದಲ ಪತ್ನಿ ಕಸ್ತೂರಮ್ಮ ಪುತ್ರರಾದ ಪ್ರಕಾಶ್, ಮಲ್ಲೇಶ್ ಎಂಬುವವರು ಬೆಳಗ್ಗೆ ಮನೆಯಲ್ಲಿ ತಂದೆಯನ್ನ ಕೂಡಿ ಹಾಕಿ ರಾಡ್ನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದವಿವೇಕಾನಂದರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಮೃತ ವಿವೇಕಾನಂದ ಕರಿಯಲ್ಲಪ್ಪನವರ್ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನ ಮಾರಾಟ ಮಾಡಿದ್ದರು. ಜಮೀನು ಮಾರಾಟ ಮಾಡಿ ಬಂದಿದ್ದ 1.30 ಲಕ್ಷ ರೂಪಾಯಿ ಹಂಚಿಕೆ ವಿಚಾರಕ್ಕೆ ಗಲಾಟೆ ನಡೆದಿದೆ. ನಂತರ ಎರಡನೇ ಪತ್ನಿ ರೇಖಾ ಎಂಬುವವರು ಜಮೀನಿಗೆ ತೆರಳಿದ್ದಾಗ, ಮೊದಲ ಪತ್ನಿ ಕಸ್ತೂರಮ್ಮ ಪುತ್ರರು ಮನೆಗೆ ಬಂದು ತಂದೆಯನ್ನ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಇನ್ನು ಘಟನೆಗೆ ಹಣದ ಹಂಚಿಕೆ ವಿಚಾರವೇ ಕಾರಣ ಎಂದು ಎರಡನೇ ಪತ್ನಿ ರೇಖಾ ಅವರು ತಿಳಿಸಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ
ಆನೇಕಲ್: ಅಪರಿಚಿತ ಮಹಿಳೆಯ ಕಾಲುಗಳು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.ಹಂತಕರು ಕೊಲೆ ಮಾಡಿ ಕತ್ತರಿಸಿ ಎಸೆದು ಹೋಗಿದ್ದಾರೆ. ಕೆರೆಯ ಜಾಗದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಕಾಲುಗಳು ಪತ್ತೆಯಾಗಿದ್ದು, ಇದೇ ಜಾಗದ ಸಮೀಪ ಕಳೆದ ಹದಿನೈದು ದಿನಗಳ ಹಿಂದೆ ಮಹಿಳೆಯ ಒಂದು ಕೈ ಕೂಡ ಪತ್ತೆಯಾಗಿತ್ತು. ಇದೀಗ ಕೈ ಸಿಕ್ಕ ಜಾಗದ ಸಮೀಪವೇ ಮಹಿಳೆಯ ಎರಡು ಕಾಲುಗಳು ಕಂಡಿದೆ. ಮುಂಜಾನೆ ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಉಳಿದ ಮೃತದೇಹದ ಅಂಗಾಂಗಗಳ ಹುಡುಕಾಟ ಶುರುವಾಗಿದೆ. ಬನ್ನೇರುಘಟ್ಟ ಪೊಲೀಸರಿಗೆ ಇದೊಂದು ಸ್ಪೆಷಲ್ ಕೇಸ್ ಆಗಿದ್ದು, ತಲಾಶ್ ನಡೆಸಿದ್ದಾರೆ.
ತುಮಕೂರು: ಜಿಲ್ಲೆಯ ಕೊರಟಗೆರೆ ಬಸ್ ನಿಲ್ದಾಣದಲ್ಲಿ 2 ಕೆಎಸ್ಆರ್ಟಿಸಿ ಬಸ್ಗಳು ಡಿಕ್ಕಿಯಾಗಿ 15 ಜನರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೌರಿಬಿದನೂರುನಿಂದ ತುಮಕೂರಿಗೆ ಹೋಗುತ್ತಿದ್ದ ಬಸ್ಗೆ ತುಮಕೂರಿನಿಂದ ಪಾವಗಡಕ್ಕೆ ತೆರಳುತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Thu, 14 March 24