ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಶೂಟರ್​​ನ​​ ಕೈಕಾಲು ಕಟ್ಟಿ, ಬೆಂಕಿ ಹಚ್ಚಿ ಬರ್ಬರ ಕೊಲೆ

|

Updated on: Jan 29, 2024 | 8:52 PM

ರಾಜನ್ ಮೃತದೇಹವನ್ನು ಆತನ ಚಿಕ್ಕಮ್ಮನ ಮಗ ಪ್ರಿನ್ಸ್ ಗುರುತಿಸಿದ್ದು, ಆತ ತಮ್ಮ ಕುಟುಂಬದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಆತನ ಕೈ ಮತ್ತು ಕಾಲುಗಳನ್ನು ಕಟ್ಟಲಾಗಿತ್ತು, ದೇಹದ ಹಲವಾರು ಭಾಗಗಳು ಕಾಣೆಯಾಗಿದೆ. ಆತನಿಗೆ ಮದುವೆಯಾಗಿದ್ದು ಆ ದಾಂಪತ್ಯದಲ್ಲಿ ಮಗು ಕೂಡಾ ಇದೆ. ಪ್ರಿನ್ಸ್ ಪ್ರಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ಆತ ಮನೆಯಿಂದ ದೂರ ವಾಸಿಸುತ್ತಿದ್ದನು.

ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಶೂಟರ್​​ನ​​  ಕೈಕಾಲು ಕಟ್ಟಿ, ಬೆಂಕಿ ಹಚ್ಚಿ ಬರ್ಬರ ಕೊಲೆ
ರಾಜನ್ ಹತ್ಯೆ
Follow us on

ಚಂಡೀಗಢ:  ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್  (Lawrence Bishnoi)ಗ್ಯಾಂಗ್‌ಗೆ ಸೇರಿದ ಶೂಟರ್‌ಗೆ ಬೆಂಕಿ ಹಚ್ಚುವ ಮೊದಲು ಕೈಕಾಲುಗಳನ್ನು ಕಟ್ಟಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಹಲವು ಗ್ಯಾಂಗ್ ವಾರ್ ಗಳಲ್ಲಿ ಭಾಗಿಯಾಗಿದ್ದ ರಾಜನ್ (Rajan) ಇಂದು (ಸೋಮವಾರ) ಬೆಳಗ್ಗೆ ಹರ್ಯಾಣದ  ಯಮುನಾನಗರ ಜಿಲ್ಲೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಗ್ಯಾಂಗ್​​ಸ್ಟರ್ ದೇವಿಂದರ್ ಬಂಬಿಹಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಯಾರು ಈ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾನೆ.

ರಾಜನ್ ಮೃತದೇಹವನ್ನು ಆತನ ಚಿಕ್ಕಮ್ಮನ ಮಗ ಪ್ರಿನ್ಸ್ ಗುರುತಿಸಿದ್ದು, ಆತ ತಮ್ಮ ಕುಟುಂಬದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಆತನ ಕೈ ಮತ್ತು ಕಾಲುಗಳನ್ನು ಕಟ್ಟಲಾಗಿತ್ತು, ದೇಹದ ಹಲವಾರು ಭಾಗಗಳು ಕಾಣೆಯಾಗಿದೆ. ಆತನಿಗೆ ಮದುವೆಯಾಗಿದ್ದು ಆ ದಾಂಪತ್ಯದಲ್ಲಿ ಮಗು ಕೂಡಾ ಇದೆ. ಪ್ರಿನ್ಸ್ ಪ್ರಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ಆತ ಮನೆಯಿಂದ ದೂರ ವಾಸಿಸುತ್ತಿದ್ದನು.

ರಾಜನ್ ಲಾಡ್ವಾ ನಿವಾಸಿಯಾಗಿದ್ದು, ಅವರ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಬಿಹಾ ತಮ್ಮ ಆನ್‌ಲೈನ್ ಪೋಸ್ಟ್‌ನಲ್ಲಿ ಗಾಯಕ ಸಿಧು ಮೂಸೆವಾಲಾ ಮತ್ತು ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗಳನ್ನು ಸೂಚಿಸಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ಗೊಗಮೆಡಿ ಅವರ ಜೈಪುರದ ಮನೆಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರೆ, ಮೂಸೆವಾಲಾ 2022 ರಲ್ಲಿ ಕೊಲ್ಲಲ್ಪಟ್ಟರು.

ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ಎರಡೂ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಯಾರು ಲಾರೆನ್ಸ್ ಬಿಷ್ಣೋಯ್?

ಬಿಷ್ಣೋಯ್ ಹರ್ಯಾಣ ಮೂಲದವರು. ಬಾಲ್ಯದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಲಾರೆನ್ಸ್,  ಪಂಜಾಬ್ ವಿಶ್ವವಿದ್ಯಾಲಯದಿಂದ (ಪಿಯು) ಎಲ್​ಎಲ್​ಬಿ ಮುಗಿಸಿದ್ದ. ಅಷ್ಟೇ ಯಾಕೆ ಅವರ ತಂದೆ 1992 ರಲ್ಲಿ ಹರ್ಯಾಣ ಪೊಲೀಸ್​ನಲ್ಲಿ 5 ವರ್ಷಗಳ ಕಾನ್ಸ್​ಟೇಬಲ್​ ಆಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್ ಮಗನಾಗಿ ಬೆಳೆದ ಬಿಷ್ಣೋಯ್, ಎಲ್​ಎಲ್​ಬಿ ಪದವಿ ಪಡೆದ ಬಳಿಕ ಇಳಿದದ್ದು ಅಕ್ರಮ ಚಟುವಟಿಕೆಗಳಲ್ಲಿ ಎಂಬುದು ವಿಶೇಷ.

ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಬಿಷ್ಣೋಯ್ ವಿರುದ್ದ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿದ್ದವು. ಅದಾಗಲೇ ಹೊಸ ಹವಾ ಸೃಷ್ಟಿಸಿಕೊಂಡಿದ್ದ ಬಿಷ್ಣೋಯ್ ಆ ಬಳಿಕ ಗ್ಯಾಂಗ್ ಕಟ್ಟಿಕೊಂಡಿದ್ದ. ಅಲ್ಲದೆ ಮದ್ಯ ಮಾಫಿಯಾ, ಪಂಜಾಬಿ ಗಾಯಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಂದ ಹಣವನ್ನು ಸುಲಿಗೆ ಮಾಡಲಾರಂಭಿಸಿದ.

ಹೀಗೆ ಪಂಜಾಬ್-ಹರ್ಯಾಣ ಭಾಗದಲ್ಲಿ ಲಾರೆನ್ಸ್ ಬಿಷ್ಣೋಯ್ ಡಾನ್ ಆಗಿ ಮೆರೆಯಲಾರಂಭಿಸಿದ. ಹೀಗೆ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಂಡ ಬಿಷ್ಣೋಯ್ ನೆಟ್​ವರ್ಕ್​ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿತ್ತು. ಅಂದರೆ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಅಲ್ಲದೆ ಕೆನಡಾದಲ್ಲೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ.

ಆದರೆ ಲಾರೆನ್ಸ್ ಬಿಷ್ಣೋಯ್​ಗೆ ಸಂಪೂರ್ಣ ಮೀಡಿಯಾ ಕವರೇಜ್ ಸಿಕ್ಕಿದ್ದು ಬಾಲಿವುಡ್​ ನಟ ಸಲ್ಮಾನ್ ಖಾನ್ ಪ್ರಕರಣದಲ್ಲಿ. 2018 ರಲ್ಲಿ ಕೃಷ್ಣ ಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್​ ಬಿಷ್ಣೋಯ್ ಸಲ್ಮಾನ್ ಖಾನ್​ಗೆ ಬೆದರಿಕೆ ಹಾಕಿದ್ದ. ಬಿಷ್ಣೋಯ್ ಸಮುದಾಯದವರು ಕೃಷ್ಣ ಮೃಗವನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣ ಮೃಗ ಕೊಂದ ಸಲ್ಮಾನ್​ನನ್ನು ನಾನು ಬಿಡುವುದಿಲ್ಲ, ಮುಗಿಸುತ್ತೇನೆ ಎಂದು ನ್ಯಾಯಾಲಯದ ಮುಂದೆಯೇ ಹೇಳಿದ್ದ. ಈ ಹೇಳಿಕೆಯನ್ನು ಅಂದು ಯಾರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಅದುವರೆಗೆ ಲಾರೆನ್ಸ್ ಬಿಷ್ಣೋಯ್ ಎಂಬ ಡಾನ್ ಇದ್ದಾನೆ ಎಂಬುದು ಕೂಡ ಮುಂಬೈನವರಿಗೆ ತಿಳಿದಿರಲಿಲ್ಲ.

ಆದರೆ ಯಾವಾಗ ತನ್ನ ಸಾಮ್ರಾಜ್ಯ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯಿತೋ ಲಾರೆನ್ಸ್ ಬಿಷ್ಣೋಯ್ ಪಂಜಾಬ್​ನಲ್ಲಿ ಮಾತ್ರವಲ್ಲದೆ, ಮುಂಬೈಗೂ ತನ್ನ ಕುಕೃತ್ಯಗಳನ್ನು ವಿಸ್ತರಿಸಿಕೊಂಡಿದ್ದ. ಅದರಲ್ಲೂ ಮುಖ್ಯವಾಗಿ ಶಸ್ತ್ರಾಸ್ತಗಳಂತಹ ದೊಡ್ಡ ದೊಡ್ಡ ಡೀಲ್​ಗಳ ಹಿಂದೆ ಲಾರೆನ್ಸ್ ಹೆಸರು ಕೇಳಿ ಬಂದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾರೆನ್ಸ್ ಬಿಷ್ಣೋಯ್​ನನ್ನು ಬಂಧಿಸಿದ್ದರು. ಅಲ್ಲದೆ ಈತನ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣವನ್ನು ವಿಧಿಸಿ ಇದೀಗ ತಿಹಾರ್ ಜೈಲಿನಲ್ಲಿಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿ ವಸಂತ್ ಕುಂಜ್‌ನಲ್ಲಿ ತಡರಾತ್ರಿ ಶೂಟೌಟ್; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಇಬ್ಬರು ಸದಸ್ಯರ ಬಂಧನ 

ಲಾರೆನ್ಸ್ ಬಿಷ್ಣೋಯ್ ಜೈಲು ಪಾಲಾಗಿದ್ದರೂ ತನ್ನ ನೆಟ್​ವರ್ಕ್​ ಮಾತ್ರ ಮುಂದುರೆದಿತ್ತು ಎಂಬುದಕ್ಕೆ ಸಿಧು ಮೂಸೆವಾಲ ಅವರ ಹತ್ಯೆ ಜೊತೆ ಆತನ ಹೆಸರು ಥಳುಕು ಹಾಕಿಕೊಂಡಿರುವುದೇ ಸಾಕ್ಷಿ. ಕೆಲ ಮೂಲಗಳ ಮಾಹಿತಿ ಪ್ರಕಾರ ಜೈಲಿನಿಂದಲೇ ಬಿಷ್ಣೋಯ್ ವಾಟ್ಸ್​ಆ್ಯಪ್​ ಮುಖಾಂತರ ತನ್ನ ಗ್ಯಾಂಗ್​ ಅನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮುಂದುವರೆದ ಭಾಗ ಸಿಧು ಮೂಸೆವಾಲ ಅವರ ಹತ್ಯೆ ಎನ್ನಲಾಗಿದೆ.

ಇನ್ನು ಲಾರೆನ್ಸ್ ಬಿಷ್ಣೋಯ್ ಕಟ್ಟಿಕೊಂಡಿರುವ ಸಾಮ್ರಾಜ್ಯದಲ್ಲಿ ಸುಮಾರು 700 ಮಂದಿ ಗ್ಯಾಂಗ್​ಸ್ಟರ್​ಗಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಂದರೆ ಒಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯದ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಈ ಮೂಲಕ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಕೆನಡಾದಲ್ಲಿ ತನ್ನ ಭೂಗತ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಭೂಗತ ಲೋಕದಲ್ಲಿ ಡಾನ್ ಆಗಿ ಮೆರೆಯುತ್ತಿದ್ದಾನೆ ಲಾರೆನ್ಸ್ ಬಿಷ್ಣೋಯ್.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ