ನವದೆಹಲಿ: ಮನೆಯಿಂದ ಕುಳಿತು ಕೆಲಸ ಮಾಡುವ (Work From Home) ಅವಕಾಶ ಸಿಕ್ಕರೆ ಹೇಗೆ? ಕೆಲವೇ ದಿನಗಳಲ್ಲಿ ಹಣ ಡಬಲ್ ಮಾಡುವ ಮಾರ್ಗ ಸಿಕ್ಕರೆ ಹೇಗೆ? ಯಾರೂ ಕೂಡ ಈ ಅವಕಾಶ ಕಳೆದುಕೊಳ್ಳುವ ಮನಸು ಮಾಡಲಾರರು. ಆದರೆ ಈ ಎರಡು ಅವಕಾಶಗಳ ಮೂಲಕ ದುಷ್ಕರ್ಮಿಗಳು ಯುವತಿಯೊಬ್ಬಳಿಗೆ ಲಕ್ಷಾಂತರ ರೂ ಪಂಗನಾಮ ಹಾಕಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗುರುಗ್ರಾಮದ ಸೆಕ್ಟರ್ 85 ನಿವಾಸಿಯಾದ ಆಗ್ರಾ ಮೂಲದ ಪೂಜಾ ವರ್ಮಾ ಎಂಬ ಯುವತಿ 11 ಲಕ್ಷ ರೂ ಕಳೆದುಕೊಂಡು ಪರಿತಪಿಸುತ್ತಿದ್ದಾಳೆ. ಈಕೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ. ವಂಚಕರ ಕೈಯಿಂದ ಈ ಮಹಿಳೆ 11 ಲಕ್ಷ ಹೇಗೆ ಕಳೆದುಕೊಂಡರು ಎಂಬ ಘಟನೆ ಬಹಳ ಕುತೂಹಲಕಾರಿ ಎನಿಸಿದೆ. ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ ಎನಿಸಿದೆ.
ಪೊಲೀಸ್ ಠಾಣೆಯಲ್ಲಿ ಪೂಜಾ ವರ್ಮಾ ನೀಡಿರುವ ದೂರಿನ ಪ್ರಕಾರ, ಆಕೆಗೆ ವಾಟ್ಸಾಪ್ನಲ್ಲಿ ವಂಚಕರು ಕೆಲಸದ ಅವಕಾಶ ಇರುವ ಬಗ್ಗೆ ಮೆಸೇಜ್ ಹಾಕಿದ್ದಾರೆ. ಪಾರ್ಟ್ ಟೈಮ್ ಕೆಲಸದ ಅವಕಾಶ ಇದ್ದು, ಮನೆಯಿಂದಲೇ ಕೆಲಸ ಮಾಡುವ ಅವಕಾಶ ಎಂದು ಪೂಜಾಗೆ ಆಸೆ ಹುಟ್ಟಿಸಿದ್ದಾರೆ.
ಇದನ್ನೂ ಓದಿ: ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ವಿವಿಧ ಯೂಟ್ಯೂಬ್ ಚಾನಲ್ಗಳನ್ನು ಸಬ್ಸ್ಕ್ರೈಬ್ ಆಗುವುದು ಸೇರಿದಂತೆ ಕೆಲವೊಂದಿಷ್ಟು ಕೆಲಸಗಳನ್ನು ಮಾಡಬೇಕು ಎಂದು ವಂಚಕರು ಆ ಯುವತಿಗೆ ತಿಳಿಸುತ್ತಾರೆ. ಅದಾದ ಬಳಿಕ ಆ ವಂಚಕರು ಕಳುಹಿಸುವ ಲಿಂಕ್ ಮೂಲಕ ಯುವತಿಯು ಟೆಲಿಗ್ರಾಮ್ ಚಾನಲ್ಗೆ ಸೇರ್ಪಡೆಯಾಗುತ್ತಾರೆ. ಅಲ್ಲಿಂದ ವಂಚಕರು ಪೂಜಾ ವರ್ಮಾಗೆ ಪಂಗನಾಮ ಹಾಕುವ ಆಟ ಶರುವಿಟ್ಟುಕೊಳ್ಳುತ್ತಾರೆ.
ವಂಚಕರ ಗಾಳಕ್ಕೆ ಬಿದ್ದ ಯುವತಿ ಟೆಲಿಗ್ರಾಂನ ಗ್ರೂಪ್ವೊಂದಕ್ಕೆ ಸೇರುತ್ತಾಳೆ. ಅಲ್ಲಿ ಆಕೆ ಮನೆಯಿಂದಲೇ ಕೂತು ಯೂಟ್ಯೂಬ್ ಚಾನಲ್ಗಳನ್ನು ಸಬ್ಸ್ಕ್ರೈಬ್ ಆಗುವಂತೆ ತಿಳಿಸಲಾಗುತ್ತದೆ. ಇದರ ಜೊತೆಗೆ, ಒಂದೊಳ್ಳೆಯ ಸ್ಕೀಮ್ ಇದ್ದು, ಬ್ಯಾಂಕ್ ಖಾತೆಯೊಂದಕ್ಕೆ 5,000 ರೂ ಹಾಕುವಂತೆ ವಂಚಕರು ತಿಳಿಸುತ್ತಾರೆ. ಸಣ್ಣ ಮೊತ್ತ ಅಲ್ಲವಾ ಎಂದು ಪೂಜಾ ವರ್ಮಾ 5,000 ರೂ ಹಣವನ್ನು ಈ ಬ್ಯಾಂಕ್ ಖಾತೆಗೆ ಹಾಕುತ್ತಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್
ಪೂಜಾ ವರ್ಮಾಗೆ ಅಚ್ಚರಿ ಎನಿಸುವಂತೆ ಕೆಲವೇ ದಿನಗಳಲ್ಲಿ ಆಕೆಗೆ 6,440 ರೂ ರಿಟರ್ನ್ ಬರುತ್ತದೆ. ಇದು ಯಾವುದೋ ಬೋಗಸ್ ಸ್ಕೀಮ್ ಅಲ್ಲ ಎಂದು ಪೂಜಾ ನಂಬಿಬಿಡುತ್ತಾಳೆ. ಬಳಿಕ ಕಂಗನಾ ಹೆಸರಿನಲ್ಲಿ ಯುವತಿಯೊಬ್ಬಳು ಪೂಜಾ ವರ್ಮಾಗೆ ಕರೆ ಮಾಡಿ 10,000 ರೂ ಹೂಡಿಕೆ ಮಾಡುವಂತೆ ಕೇಳುತ್ತಾಳೆ. ಇದಕ್ಕೆ ಪೂಜಾ ಒಪ್ಪುತ್ತಾಳೆ. ಆ ನಂತರ, ಕಂಗನಾ ಈ ಸ್ಕೀಮ್ನಲ್ಲಿ 1,00,000 ರೂ ಹೂಡಿಕೆ ಮಾಡಿದರೆ ಅದರಿಂದ ಬರುವ ಲಾಭಗಳನ್ನು ಆಗಾಗ್ಗೆ ಹಿಂಪಡೆಯಬಹುದು ಎಂದು ಹೇಳುತ್ತಾಳೆ. ಇದೇ ರೀತಿ ಪೂಜಾ ವರ್ಮಾ ಒಟ್ಟು 11.45 ಲಕ್ಷ ರೂ ಹಣವನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಾಕುತ್ತಾಳೆ. ಬಳಿಕ ವಂಚಕರ ಗ್ಯಾಂಗ್ ಕಣ್ಮರೆಯಾಗುತ್ತದೆ.
ನಮ್ಮ ವಾಟ್ಸಾಪ್ಗೆ ನಾನಾ ರೀತಿಯ ಆಮಿಷಗಳಿರುವ ಮೆಸೇಜ್ಗಳು ಬರುವುದನ್ನು ಬಹುತೇಕ ನಾವೆಲ್ಲರೂ ನೋಡಿದ್ದೇವೆ. ಇದರಲ್ಲಿ ಕೊಡಲಾಗಿರುವ ಲಿಂಕ್ಗಳು ನಿಗೂಢವಾಗಿರುತ್ತವೆ. ನಿಮ್ಮ ಹಣಕ್ಕೆ ಬಹಳ ಹೆಚ್ಚು ಬಡ್ಡಿ ಕೊಡುತ್ತೇವೆ; ಈ ಲಿಂಕ್ ಕ್ಲಿಕ್ ಮಾಡಿದರೆ ಉಚಿತ ಆ್ಯಪಲ್ ಫೋನ್ ಸಿಗುತ್ತೆ ಇತ್ಯಾದಿ ಭಾರೀ ಅಸೆ ಹುಟ್ಟಿಸಲಾಗುತ್ತದೆ. ಇವು ವಂಚಕ ಮೆಸೇಜ್ಗಳೇ ಆಗಿರುವ ಸಾಧ್ಯತೆ ಹೆಚ್ಚು. ಹಾಗೆಯೇ, ಸ್ಕೀಮ್ನ ಲಾಭ ಪಡೆಯಲು ಅಥವಾ ಗಿಫ್ಟ್ ಪಡೆಯಲು ಮೊದಲೇ ಒಂದಿಷ್ಟು ಹಣ ಪಾವತಿ ಮಾಡಬೇಕು ಎಂದೆಲ್ಲಾ ಹೇಳಿದಾಗ ಎಚ್ಚೆತ್ತುಕೊಳ್ಳುವುದು ಅನಿವಾರ್ಯ.
Published On - 11:49 am, Sun, 23 April 23