ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ

| Updated By: ಸಾಧು ಶ್ರೀನಾಥ್​

Updated on: Jan 06, 2021 | 2:43 PM

ವರದಕ್ಷಿಣೆ ವಿಷಯವಾಗಿ ಗಲಾಟೆ ಆರಂಭಗೊಂಡು ಪತಿ ಕಾಂತರಾಜು ತನ್ನ ಪತ್ನಿ ಚೈತ್ರಾಳನ್ನ ಮೂರನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ
ಮೃತ ಚೈತ್ರ ಮತ್ತು ಆರೋಪಿ ಪತಿ ಕಾಂತರಾಜ್
Follow us on

ನೆಲಮಂಗಲ: ಆ ಜೋಡಿ ಲವ್ ಮಾಡಿ ಕಳೆದೆರಡು ವರ್ಷದ ಹಿಂದೆ ಶಕ್ತಿ ದೇವತೆಯ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮುದ್ದಾದ ಗಂಡು ಮಗು ಸಹ ಇತ್ತು. ಆದ್ರೆ ಇತ್ತೀಚೆಗೆ ವರದಕ್ಷಿಣೆ ಭೂತ ಮೈಗೇರಿಸಿಗೊಂಡಿದ್ದ ಪತಿ, ರಾತ್ರಿ ಕುಡಿದ ಮತ್ತಿನಲ್ಲಿ ಹೆಂಡತಿಯನ್ನ ಮಹಡಿ ಮೇಲಿಂದ ತಳ್ಳಿ ಕೊಂದು ಬಿಟ್ಟಿದ್ದಾನೆ.

20 ವರ್ಷದ ಚೈತ್ರ ಹಾಗೂ 24 ವರ್ಷದ ಕಾಂತರಾಜ್ ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಅಕ್ಕ-ಪಕ್ಕದ ಗ್ರಾಮದವರು. ಇವರು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಸಿದ್ದನ ಹೊಸಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅದೇನಾಯ್ತೋ ಏನೋ ರಾತ್ರಿ ವರದಕ್ಷಿಣೆ ವಿಷಯವಾಗಿ ಗಲಾಟೆ ಆರಂಭಗೊಂಡು ಪತಿ ಕಾಂತರಾಜು ತನ್ನ ಪತ್ನಿ ಚೈತ್ರಾಳನ್ನ ಮೂರನೇ ಮಹಡಿಯಿಂದ ತಳ್ಳಿಬಿಟ್ಟಿದ್ದಾನೆ. ತಕ್ಷಣ ಚೈತ್ರಾಳ ಪೋಷಕರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಯಾವುದೇ ಪ್ರಯೋಜನವಾಗದೆ ಮಾರ್ಗ ಮಧ್ಯದಲ್ಲಿ ಚೈತ್ರ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.

ಇನ್ನೂ ಕಳೆದ ಎರಡು ವರ್ಷಗಳ‌ ಹಿಂದೆ ಮಾಕಳಿ ಬಳಿಯ ಬ್ರಿಟಾನಿಯಾ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೈತ್ರ ಮತ್ತು ಕಾಂತರಾಜ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಪೋಷಕರಿಗೆ ಪ್ರೀತಿಯ ವಿಷಯ ತಿಳಿಸದೇ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಳನೂರಿನಲ್ಲಿರುವ ಶಕ್ತಿ ದೇವತೆ ಗಾಳಿ ಮಾರಮ್ಮ ದೇವಾಲಯದಲ್ಲಿ ಮದುವೆ ಮಾಡಿ ಕೊಂಡಿದ್ದರು. ಅಲ್ಲದೆ ಅದೇ ಹೊಳಲ್ಕೆರೆಯ ಉಗಣಕಟ್ಟೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಐದಾರು ತಿಂಗಳ ನಂತರ ಚೈತ್ರ ಗರ್ಭಿಣಿಯಾದಳು. ಅಂದಿನಿಂದ ಇವರಿಬ್ಬರ ಬಾಳಲ್ಲಿ ಬಿರುಗಾಳಿ  ಎದ್ದಿದೆ.

ಆನಂದದಿಂದಿದ್ದ ಸಂಸಾರದಲ್ಲಿ ವರದಕ್ಷಿಣೆ ಭೂತ
ಚೈತ್ರ ಗರ್ಭಿಣಿಯಾದ ನಂತರ ಕಾಂತರಾಜು ಈಕೆಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ. ನಿನ್ನ ಒಡವೆಗಳನ್ನೆಲ್ಲ ತಂದು ಕೊಡು ಎಂದು ಹಿಂಸಿಸುತ್ತಿದ್ದ. ಪಾಪಿ ಪತಿ ಯಾವಾಗ ಚಿತ್ರಹಿಂಸೆ ನೀಡಲು ಶುರು ಮಾಡಿದನೋ ಅಂದಿನಿಂದ ಚೈತ್ರಳಿಗೆ ತಾಯಿ ಮನೆ ನೆನಪಾಗಿ ತನಗಾದ ನೋವನ್ನ ತಾಯಿ ಬಳಿ ಹೇಳಿಕೊಳ್ಳಲು ಶುರು ಮಾಡಿದ್ದಳು. ಇಷ್ಟೆಲ್ಲಾ ಆದ ಬಳಿಕ ಚೈತ್ರ ಪೋಷಕರು ಇವರಿಬ್ಬರನ್ನೂ ಕರೆದುಕೊಂಡು ಬಂದು ತಮ್ಮ ಜೊತೆಯಲ್ಲೇ ಇರಿಸಿಕೊಂಡಿದ್ರು. ಮಗುವಾದ ನಂತರ ಅವರೇ ನೋಡಿಕೊಂಡು ಪಾಲನೆ ಪೋಷಣೆ ಮಾಡಿದ್ದರು. ಆದ್ರೂ ಚೈತ್ರಾಳಿಗೆ ಮಾನಸಿಕ ಕಿರುಕುಳ‌ ತಪ್ಪಿರಲಿಲ್ಲ.

ಪ್ರತಿದಿನ ಮಗುವನ್ನ ತನ್ನ ತಾಯಿ ಬಳಿ ಬಿಟ್ಟು ಪೆಟ್ರೋಲ್ ಬಂಕ್‌ನಲ್ಲಿ ಚೈತ್ರ ಕೆಲಸ ಮಾಡುತ್ತಿದ್ದಳು. ಗೋದಾಮು ಒಂದರಲ್ಲಿ ಕಾಂತರಾಜು ಕೆಲ್ಸ ಮಾಡುತ್ತಿದ್ದ, ದಿನಾ ಜಗಳ ಇದ್ದರೂ ಸಹ ಇತ್ತೀಚೆಗೆ ಇಬ್ಬರು ಸೇರಿ ಮಗುವಿನ ಹುಟ್ಟುಹಬ್ಬ ಸಹ ಖುಷಿ ಖುಷಿಯಾಗಿ ಮಾಡಿದ್ದರು. ಆದ್ರೆ ನಿನ್ನೆ (ಡಿ. 5) ರಾತ್ರಿ ಅದೇನಾಯ್ತೋ ಏನೋ ಚೈತಳಿಗೆ ಕಾಂತರಾಜು ಮನಸೋಇಚ್ಚೆ ಹಲ್ಲೆ ಮಾಡಿದ್ದಾನೆ. ತಾವು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ಡಿವೈಎಸ್ಪಿ ಜಗದೀಶ್ ಸ್ಥಳ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಮಾತಿನಂತೆ, ನಿಜವಾಗಿಯೂ ಇಲ್ಲಿ ಇಬ್ಬರ ಜಗಳದಲ್ಲಿ ಹೆಂಡತಿ ಮಸಣ ಸೇರಿದ್ರೆ ಗಂಡ ಜೈಲು ಪಾಲಾಗಿದ್ದಾನೆ. ಆದ್ರೆ ಜಗತ್ತಿನ ಬಣ್ಣಗಳನ್ನರಿಯದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಮಾತ್ರ ಅಪ್ಪ ಅಮ್ಮ ಇಬ್ಬರೂ ಇಲ್ಲದೆ ಅನಾಥವಾಗಿದೆ.

ಕಾಮಾಕ್ಷಿಪಾಳ್ಯದಲ್ಲಿ ಮಹಿಳೆ ಅತ್ಯಾಚಾರ-ಕೊಲೆ: ಗೋವಾಕ್ಕೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್