ಶಿವಮೊಗ್ಗ, ಅ.21: ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ(Bhadravati) ಪಟ್ಟಣದಲ್ಲಿ ನಡೆದಿದೆ. ಸೈಯದ್ ರಜಿಖ್(30) ಮೃತ ದುರ್ದೈವಿ. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಈ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಬಂಧನಕ್ಕಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದ ಒಂಟಿ ಮನೆಯಲ್ಲಿದ್ದ ಅರ್ಚಕರ ಕುಟುಂಬದ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ನಡೆದಿದೆ. ಅಷ್ಟೇ ಅಲ್ಲ, ಒಂಟಿ ಮನೆಯಲ್ಲಿದ್ದ ಅರ್ಚಕ ದೊಡ್ಡನರಸಯ್ಯ ಶಾಸ್ತ್ರಿ ಹಾಗೂ ಪತ್ನಿ ಇಬ್ಬರನ್ನು ಮಾರಾಕಾಸ್ತ್ರಗಳಿಂದ ಥಳಿಸಿ, ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗ-ನಾಣ್ಯ ದರೋಡೆ ಮಾಡಿದ್ದಾರೆ. ಇನ್ನು 6 ಜನ ದುಷ್ಕರ್ಮಿಗಳಿಂದ ಲಾಂಗು ಮಚ್ಚು ತೋರಿಸಿ ಈ ಕೃತ್ಯ ಎಸಗಲಾಗಿದ್ದು, ಮಾಲೂರು ಆಸ್ಪತ್ರೆಯಲ್ಲಿ ಅರ್ಚಕ ಕುಟುಂಬ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾರ್ಗಮದ್ಯೆ ಯಟ್ಟಕೋಡಿ ಗ್ರಾಮದ ಮೂರು ಅಂಗಡಿಗಳನ್ನು ದೋಚಿ ಪರಾರಿಯಾಗಿರುವ ದರೋಡೆಕೋರರು, ಸುಮಾರು 15 ಲಕ್ಷ ಮೌಲ್ಯದಷ್ಟು ಗುಟ್ಕಾ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಬಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ಹಾಗೂ ಮಾಲೂರು ಪೊಲೀಸ್ ಠಾಣೆಯಲ್ಲಿ ಸರಣಿ ಕಳ್ಳತನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಟವರ್ ಏರಿ ಆತ್ಮಹತ್ಯೆಗೆ ಯತ್ನ; ವಿಡಿಯೋ ವೈರಲ್
ಮೈಸೂರು: ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಇದೀಗ ಚಿರತೆ ದಾಳಿಗೆ ಎಮ್ಮೆ ಬಲಿಯಾದ ಘಟನೆ ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ನಂದಕುಮಾರ್ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದ್ದು, ಮನೆ ಮುಂದೆ ಕಟ್ಟಿ ಹಾಕಿದ್ದ ಎಮ್ಮೆ ಮೇಲೆ ದಾಳಿ ಮಾಡಿತ್ತು. ಹಲವು ದಿನಗಳಿಂದ ಗ್ರಾಮದ ಸುತ್ತ ಮುತ್ತ ಚಿರತೆ ಹಾವಳಿ ಇದ್ದು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ