ಜೈಪುರ: ಹೋಟೆಲ್​​ನಲ್ಲಿ ಜಗಳವಾಡಿ ಸಿಟ್ಟಿಗೆದ್ದು ಇಬ್ಬರ ಮೇಲೆ ಕಾರು ಹರಿಸಿದ ವ್ಯಕ್ತಿ; ಮಹಿಳೆ ಸಾವು

|

Updated on: Dec 27, 2023 | 5:59 PM

ಮಂಗಳವಾರ ಬೆಳಗ್ಗೆ 5:30 ಮತ್ತು 6 ಗಂಟೆಗೆ ಜೈಪುರದ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರ್ಧರ್ ಮಾರ್ಗ್‌ನಲ್ಲಿರುವ ಹೋಟೆಲ್‌ನ ಹೊರಗೆ ಈ ಘಟನೆ ನಡೆದಿದೆ. ಹೊಟೇಲ್ ಹೊರಭಾಗದಲ್ಲಿ ಯುವಕ ಹಾಗೂ ಯುವತಿಯನ್ನು ಕಾರಿನಡಿಗೆ ಸಿಲುಕಿಸಲು ಯತ್ನಿಸಲಾಗಿದೆ. ಇದರಲ್ಲಿ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜೈಪುರ: ಹೋಟೆಲ್​​ನಲ್ಲಿ ಜಗಳವಾಡಿ ಸಿಟ್ಟಿಗೆದ್ದು ಇಬ್ಬರ ಮೇಲೆ ಕಾರು ಹರಿಸಿದ ವ್ಯಕ್ತಿ; ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Follow us on

ಜೈಪುರ ಡಿಸೆಂಬರ್  27: ತೀವ್ರ ವಾಗ್ವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕಾರು ಹರಿಸಿದ್ದು, ಮಹಿಳೆ ಸಾವಿಗೀಡಾದ ಘಟನೆ ಜೈಪುರದಲ್ಲಿ (Jaipur) ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ಮಂಗಳವಾರ ಮುಂಜಾನೆ ಜೈಪುರದ ಜವಾಹರ್ ಸರ್ಕಲ್ ಪ್ರದೇಶದ (Jawahar Circle area )ಹೋಟೆಲ್‌ನ ಹೊರಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿ ಮಂಗೇಶ್ ಅರೋರಾ, ಉಮಾ ಮತ್ತು ಆಕೆಯ ಸ್ನೇಹಿತ ರಾಜ್‌ಕುಮಾರ್ ಮೇಲೆ ಕಾರು ಹರಿಸಿದ್ದಾನೆ. ವಿಡಿಯೋದಲ್ಲಿ ಪುರುಷರ ಗುಂಪು ಕಾರಿನ ಮುಂದೆ ನಿಂತಿದ್ದು, ಅವರಲ್ಲಿ ಒಬ್ಬರು ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮಂಗೇಶ್ ತನ್ನ ಕಾರನ್ನು ಉಮಾ ಮತ್ತು ಆಕೆಯ ಗೆಳೆಯನ ಮೇಲೆ ಹರಿಸಿದ್ದಾನೆ. ಉಮಾ ಸ್ಥಳದಲ್ಲೇ ಮೃತಪಟ್ಟರೆ, ರಾಜ್‌ಕುಮಾರ್ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.

ಮಧ್ಯಪ್ರದೇಶದ ನಿವಾಸಿಯಾಗಿರುವ ಉಮಾ ತನ್ನ ಸ್ನೇಹಿತ ರಾಜ್‌ಕುಮಾರ್ ಜೊತೆ ಜೈಪುರದಲ್ಲಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಬೆಳಗ್ಗೆ 5:30 ಮತ್ತು 6 ಗಂಟೆಗೆ ಜೈಪುರದ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರ್ಧರ್ ಮಾರ್ಗ್‌ನಲ್ಲಿರುವ ಹೋಟೆಲ್‌ನ ಹೊರಗೆ ಈ ಘಟನೆ ನಡೆದಿದೆ. ಹೊಟೇಲ್ ಹೊರಭಾಗದಲ್ಲಿ ಯುವಕ ಹಾಗೂ ಯುವತಿಯನ್ನು ಕಾರಿನಡಿಗೆ ಸಿಲುಕಿಸಲು ಯತ್ನಿಸಲಾಗಿದೆ. ಇದರಲ್ಲಿ ಮಹಿಳೆ ಪ್ರಾಣ ಕಳೆದುಕೊಂಡಿದ್ದು, ಯುವಕನೊಬ್ಬ ಗಾಯಗೊಂಡಿದ್ದಾನೆ ಎಂದು ಎಸ್‌ಎಚ್‌ಒ ದಲ್ಬೀರ್ ಸಿಂಗ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜೈಪುರ: ಟಿಂಡರ್ ಡೇಟ್​​ಗಾಗಿ ಹೋದ 28 ವರ್ಷದ ಯುವಕ ಹೆಣವಾಗಿ ಪತ್ತೆ

“ಆರೋಪಿ ಮಂಗೇಶ್ ಅಲ್ಲಿ ತನ್ನ ಗೆಳತಿಯೊಂದಿಗೆ ಪಾನೀಯ ಸೇವಿಸುತ್ತಿದ್ದ. ಸ್ವಲ್ಪ ಸಮಯದ ನಂತರ ಆತ ಉಮಾ ಬಗ್ಗೆ ಕಾಮೆಂಟ್ ಮಾಡಿದ್ದಾನೆ. ರಾಜ್‌ಕುಮಾರ್ ಕಾಮೆಂಟ್‌ಗಳಿಗೆ ಆಕ್ಷೇಪಿಸಿದಾಗ, ಮಂಗೇಶ್ ನನಗೆ ಆಕೆ ಗೊತ್ತು ಎಂದು ಹೇಳಿದ್ದಾನೆ. ಅಷ್ಟರಲ್ಲಿ ಮಂಗೇಶ್ ಮತ್ತು ಆತನ ಗೆಳತಿ ಕೂಡ ಅಲ್ಲಿಗೆ ಬಂದು ಹೋಟೆಲ್ ಮುಂದೆ ಅವರ ಜೊತೆ ಗಲಾಟೆ ಆರಂಭಿಸಿದರು. ಜಗಳ ಉಲ್ಬಣಗೊಳ್ಳುತ್ತಿದ್ದಂತೆ, ಮಂಗೇಶ್ ಅಲ್ಲಿಂದ ಹೊರಟು ಹೋದ. ತಕ್ಷಣವೇ ಕಾರಿನಲ್ಲಿ ಹಿಂತಿರುಗಿ ಬಂದ ಆತ ರಾಜ್‌ಕುಮಾರ್ ಮತ್ತು ಉಮಾ ಮೇಲೆ ಕಾರು ಹರಿಸಿದ್ದಾನೆ.
ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಕೊಲೆ ಯತ್ನದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ