ಬಂಗಾರದ ಜೊತೆ ರೇಷ್ಮೆ ಸೀರೆಗಳನ್ನು ಕದ್ದೊಯ್ದ ಕಳ್ಳರು

TV9kannada Web Team

TV9kannada Web Team | Edited By: Rakesh Nayak Manchi

Updated on: Oct 25, 2022 | 2:34 PM

ಒಂದಡೆ ದುಷ್ಕರ್ಮಿಗಳ ಕಾಟ ಆದರೆ ಇನ್ನೊಂದೆಡೆ ಕಳ್ಳರ ಕಾಟ. ರಾತ್ರಿ ವೇಳೆ ಮನೆಗೆ ನುಗ್ಗವು ಈ ಕಳ್ಳರು ಬಂಗಾರದ ಜೊತೆಗೆ ರೇಷ್ಮೆ ಸೀರೆಗಳನ್ನು ಕೂಡ ಕದ್ದು ಪರಾರಿಯಾಗಿದ್ದಾರೆ.

ಬಂಗಾರದ ಜೊತೆ ರೇಷ್ಮೆ ಸೀರೆಗಳನ್ನು ಕದ್ದೊಯ್ದ ಕಳ್ಳರು
ಮನೆಗೆ ನುಗ್ಗುತ್ತಿರುವ ಕಳ್ಳರು

ಕಲಬುರಗಿ: ಬೀಗ ಹಾಕಿದ್ದ ಮನೆಗೆ ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಗೇಟ್ ತೆರೆದು ಬಂದ ಕಳ್ಳರು, ರೋಡ್ ಗೋಲ್ಡ್ ಬಿಟ್ಟು ಅಸಲಿ ಚಿನ್ನಾಭರಣದ ಜೊತೆಗೆ ರೇಷ್ಮೆ ಸೀರೆಯನ್ನು ಕದ್ದು ಪರಾರಿಯಾಗಿದ್ದಾರೆ. ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಳೆದ ರಾತ್ರಿ ಎರಡು ಕಡೆ ಕಳ್ಳತನ ಪ್ರಕರಣಗಳು ನಡೆದಿವೆ. ಅದು ಕೂಡಾ ಪೊಲೀಸ್ ಇಲಾಖೆಯಲ್ಲಿ ಇದ್ದ ಇಬ್ಬರ ಮನೆಗಳಿಗೆ ಕಳೆದ ರಾತ್ರಿ ಕನ್ನ ಹಾಕಿರುವ ಕಳ್ಳರು, ಚಿನ್ನಾಭರಣ, ರೇಷ್ಮೆ ಸೀರೆ, ಹಣ ಕದ್ದುಕೊಂಡು ಪರಾರಿಯಾಗಿದ್ದಾರೆ. ನಿವೃತ್ತ ಕೆಎಸ್ಆರ್​ಪಿ ಪೇದೆ ಸಿದ್ದಲಿಂಗಯ್ಯ ಅವರ ಮನೆಯಿಂದ 10 ಗ್ರಾಂ ಚಿನ್ನಾಭರಣ, ಇಪ್ಪತ್ತು ಸಾವಿರ ನಗದು, 10 ರೇಷ್ಮೆ ಸೀರೆ ಕದ್ದೋಯ್ದಿದ್ದರೆ, ಮಹಾಂತೇಶ್ ಎಂಬವರ ಮನೆಯಿಂದ 50 ಗ್ರಾಂ ಚಿನ್ನಾಭರಣ, ಹತ್ತು ಸಾವಿರ ನಗದು ಸೇರಿದಂತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳಲ್ಲಿನ ಪೆಟ್ರೋಲ್ ಅನ್ನು ಕೂಡಾ ಕದ್ದುಕೊಂಡು ಹೋಗಿದ್ದಾರೆ.

ಈ ಇಬ್ಬರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ಕಳ್ಳರು, ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಹೋಗಿದ್ದಾರೆ. ಇನ್ನು ನಿವೃತ್ತ ಕೆಎಸ್​ಆರ್​ಪಿ ಸಿದ್ದಲಿಂಗಯ್ಯ ಮನೆಯಲ್ಲಿ ನಕಲಿ ಬಳೆಗಳು ಇದ್ದರೂ ಕಳ್ಳರು ಅವುಗಳನ್ನು ನೋಡಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ತಾಜಾ ಸುದ್ದಿ

ಕಳೆದ ವಾರವಷ್ಟೇ ಇದೇ ಬಡಾವಣೆಯಲ್ಲಿ ದುಷ್ಕರ್ಮಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಲ್ಲೆಸದು ಹೋಗಿದ್ದ. ಇದರಿಂದ ಬಡಾವಣೆಯ ಜನರು ಕಂಗಾಲಾಗಿದ್ದರು. ಆದರೆ ಈ ಬಾರಿ ಮನೆಗಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಲಬುರಗಿ ನಗರದಲ್ಲಿ ಒಂದಲ್ಲಾ ಒಂದು ಕಡೆ ಮನೆಗಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿವೆ. ಇದು ಜನರ ನಿದ್ದೆ ಕೆಡಿಸಿದೆ. ಪೊಲೀಸರು ಸರಿಯಾಗಿ ರಾತ್ರಿ ಗಸ್ತು ತಿರಗುತ್ತಿಲ್ಲಾ, ಕಳ್ಳರನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿಲ್ಲ, ರಾತ್ರಿ ಸಾರ್ವಜನಿಕರು ಓಡಾಡಲು, ಮನೆಯಲ್ಲಿರಲು ಕೂಡಾ ಭಯ ಪಡುವಂತಾಗಿದೆ ಎಂದು ಸಾರ್ವಜನಿಕರು ಗೋಳಾಡುತ್ತಿದ್ದಾರೆ. ಸದ್ಯ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ: ಸಂಜಯ್, ಟಿವಿ9 ಕಲಬುರಗಿ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada