ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು: ಯುವತಿ ಸಾವು, ಯುವಕ ಪಾರು

|

Updated on: Jun 06, 2023 | 3:40 PM

ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿಯಲ್ಲಿ ನಡೆದ ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು: ಯುವತಿ ಸಾವು, ಯುವಕ ಪಾರು
ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು
Follow us on

ಹಾವೇರಿ: ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಹಾವೇರಿಯಲ್ಲಿ (Haveri) ನಡೆದ ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿ.

ಬಾಗಲಕೋಟೆ ಮೂಲದ ಅಖಿಲ್​​ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಬಾಳುವುದಾದರೆ ಇಬ್ಬರೂ ಜೊತೆಗೆ ಬಾಳುವ ನಿರ್ಣಯ ಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್​ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹಾವೇರಿ: ಪ್ರೇಯಸಿ ಸಹೋದರರಿಂದ ಟಾರ್ಚರ್, ಅಣ್ಣನ ಲವ್ ಸ್ಟೋರಿಗೆ ಬಲಿಯಾದ ತಮ್ಮ

ಕೂಡಲೇ ಎಚ್ಚೆತ್ತ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಹೇಮಾ ಕೊನೆಯುಸಿರೆಳೆದಿದ್ದಾಳೆ. ಪ್ರಜ್ಞೆ ಕಳೆದುಕೊಂಡಿದ್ದ ಅಖಿಲ್​ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಚಳಗೇರಿ ಟೋಲ್ 5 ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೂ ಮುನ್ನ ಪೋಷಕರಿಗೆ ಹೇಮಾ ಹೇಳಿದ್ದೇನು?

ಆತ್ಮಹತ್ಯೆಗೂ ಮುನ್ನ ಹೇಮಾ ಪೋಷಕರಿಗೆ ದೂರವಾಣಿ ಕರೆ ಮಾಡಿದ್ದಾಳೆ. ನಮ್ಮ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗುತ್ತಾ ಇದ್ದೇವೆ ಪೋಷಕರಿಗೆ ತಿಳಿಸಿದ್ದಾಳೆ. ಇಷ್ಟು ಹೇಳಿ ಕಾಲ್ ಕಟ್ ಮಾಡಿದ್ದ ಹೇಮಾ ಮತ್ತು ಅಖಿಲ್ ಬಾಂಬೆಗೆ ಹೋಗದೆ ಬಸ್​ನಲ್ಲಿ ವಿಷ ಸೇವಿಸಿದ್ದಾರೆ.

ಆತ್ಮಹತ್ಯೆ ಸಹಾಯವಾಣಿ

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ