ವೈದ್ಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ: ಮಾರುವೇಷದಲ್ಲಿದ್ದ ಎಕ್ಸ್-ರೇ ತಂತ್ರಜ್ಞ ಅರೆಸ್ಟ್
ವೈದ್ಯರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಎಕ್ಷರೇ ತಂತ್ರಜ್ಞ ಎಸ್ಕೇಪ್ ಆಗಿದ್ದ. ದೂರಿನ ಅನ್ವಯ ಅಖಾಡಕ್ಕಿಳಿದಿದ್ದ ಬಾಗಲಕೋಟೆ ಪೊಲೀಸರು, ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ: ವೈದ್ಯರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ (Fraud) ಎಕ್ಷರೇ ತಂತ್ರಜ್ಞನನ್ನು ಪೊಲೀಸರು ಎರಡೂವರೆ ವರ್ಷದ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವನಾಥ ತೆನಹಳ್ಳಿ ಬಂಧಿತ ಆರೋಪಿಯಾಗಿದ್ದಾನೆ. ಎಕ್ಷರೇ ಮಷಿನ್ ,ಸ್ಕ್ಯಾನಿಂಗ್ ಮಷಿನ್ ಕೊಡಿಸುವುದಾಗಿ ಹೇಳಿ ವೈದ್ಯರಿಂದ ಹಣ ಪಡೆದು ಪರಾರಿಯಾಗಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲಕೋಟೆ (Bagalkot) ನಗರ ಠಾಣೆ ಪೊಲೀಸರು, ಮಾರುವೇಷದಲ್ಲಿ ತಲೆಮರೆಸಿಕೊಂಡಿದ್ದ ವಿಶ್ವನಾಥನನ್ನು ಬಂಧಿಸಿದ್ದಾರೆ.
ಬಾಗಲಕೋಟೆಯ ವಾಸನದ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಶ್ವನಾಥ, ಲಭಾಂಶದ ಜೊತೆಗೆ ಎಕ್ಷರೇ ಮಷಿನ್, ಸ್ಕ್ಯಾನಿಂಗ್ ಮಷಿನ್ ಕೊಡಿಸುವುದಾಗಿ ನಂಬಿಸಿ ಬಾಗಲಕೋಟೆಯ ಪ್ರತಿಷ್ಟಿತ ವೈದ್ಯರಿಂದ 15 ಲಕ್ಷ, 20 ಲಕ್ಷದಂತೆ ಅನೇಕ ವೈದ್ಯರು ಹಾಗೂ ಅವರ ಸಂಬಂಧಿಕರಿಂದ ಎರಡು ಕೋಟಿಗೂ ಅಧಿಕ ಹಣ ಪಡೆದಿದ್ದ. ಹಣಕೊಟ್ಟವರಲ್ಲಿ ಡಾ ಸತೀಶ್ ಬಿರಾದಾರ, ಡಾ ಗಿರೀಶ್ ವಾಸನದ, ಬಸವರಾಜ ಹೂಗಾರ ಸೇರಿದಂತೆ ಅನೇಕರು ಸೇರಿದ್ದಾರೆ.
ಇದನ್ನೂ ಓದಿ: UPI Frauds: ಭಾರತದಲ್ಲಿ ಒಂದೇ ವರ್ಷದಲ್ಲಿ ಯುಪಿಐ ಸಂಬಂಧ 1 ಲಕ್ಷ ಸಮೀಪ ವಂಚನೆ ಪ್ರಕರಣಗಳು; ಹೇಗೆಲ್ಲಾ ವಂಚಿಸುತ್ತಾರೆ ನೋಡಿ
ಹೀಗೆ ನಂಬಿಸಿ ಹಣ ಪಡೆದು ಸಂಪರ್ಕಕ್ಕೇ ಸಿಗದೆ ಪರಾರಿಯಾಗಿದ್ದ ವಿಶ್ವನಾಥನ ವಿರುದ್ಧ ವೈದ್ಯ ಬಸವರಾಜ ಹೂಗಾರ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು, ವಿಶ್ವನಾಥ, ಆತನ ಪತ್ನಿ ರೂಪಾ, ಆತನ ಸ್ನೇಹಿತ ನಾಗರಾಜ ಅಕ್ಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, 6 ವೈದ್ಯರಿಗೆ ವಿಶ್ವನಾಥ ನೀಡಿದ್ದ ಚೆಕ್ಗಳು ಕೂಡ ಬೌನ್ಸ್ ಆಗಿದ್ದವು. ಈ ಸಂಬಂಧವೂ ಪ್ರಕರಣ ದಾಖಲಾಗಿದೆ.
ಹಣ ಪಡೆದು ವಂಚಿಸಿದ್ದ ವಿಶ್ವನಾಥ ಕಳೆದ ಎರಡೂವರೆ ವರ್ಷದಿಂದ ಮಾರುವೇಷದಲ್ಲಿ ಕಿರಾಣಿ ಅಂಗಡಿ, ಹಮಾಲಿ, ಹೊಟೆಲ್‌ನಲ್ಲಿ ಪಾರ್ಸಲ್ ಕಟ್ಟಿಸುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಒಂದು ಹೊಟೆಲ್‌ನಲ್ಲಿ ಪಾರ್ಸಲ್ ಕಟ್ಟುವ ಕೆಲಸ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ವಿಶ್ವನಾಥ ತಗಲಾಕೊಂಡಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Tue, 6 June 23