ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ದೊಮ್ಮಲೂರು ಬಳಿಯ ರೂಮ್‌ನಲ್ಲಿ ನಡೆದಿದೆ. ಶ್ರೀನಿವಾಸ್(45) ಕೊಲೆಯಾದ ವ್ಯಕ್ತಿ. 40 ದಿನಗಳ ನಂತರ ನಿನ್ನೆ ರಾಜ್ಯದಲ್ಲಿ ಮದ್ಯದಂಗಡಿಗಳು ತೆರೆದಿದ್ದವು. 40 ದಿನದ ವನವಾಸ ಮುಗಿಸಿ ಇವತ್ತು ಕಂಠಪೂರ್ತಿ ಕುಡಿಬೇಕು ಎಂದು ಹೋದವರು ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಆದರೆ ಈತ ಮಾಡಿದ್ದು ತನ್ನ ಸ್ನೇಹಿತನ ಹತ್ಯೆ.
ನಿನ್ನೆ ಬೆಳಗ್ಗೆ ವೈನ್ ಶಾಪ್ ಒಪನ್ ಆಗಿದ ಕೂಡಲೇ ಕ್ಯೂ ನಿಂತು ಸಂತೋಷ್ ಮತ್ತು ಶ್ರೀನಿವಾಸ್ ಎಂಬ ಇಬ್ಬರು ಸ್ನೇಹಿತರು ಮದ್ಯ ಖರೀದಿಸಿದ್ದರು. ದೊಮ್ಮಲೂರಿನ ಬಳಿ ಇರುವ ರೂಮ್ ನಲ್ಲಿ ಕುಡಿದು ಟೈಟಾಗಿದ್ರು. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸಂತೋಷ್ ಶ್ರೀನಿವಾಸ್ಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಹಲ್ಲೆ ಪರಿಣಾಮ ಶ್ರೀನಿವಾಸ್ಗೆ ಇಂಟರ್ನಲ್ ಬ್ಲೀಡಿಂಗ್ ಆಗಿದೆ.
ದೊಣ್ಣೆಯಿಂದ ತಲೆಗೆ ಹೊಡೆದಿದ್ರೂ ರಕ್ತ ಹೊರಗೆ ಬಂದಿರಲಿಲ್ಲ. ತಲೆಗೆ ಪೆಟ್ಟಾದ ಹಿನ್ನೆಲೆ ಶ್ರೀನಿವಾಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿ ಮನೆಗೆ ಬಂದ ಬಳಿಕ ರಾತ್ರಿ 8 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಜೀವನ್ ಭೀಮಾ ನಗರ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.