ಮಂಗಳೂರು: ನೈತಿಕ ಪೊಲೀಸ್‌ಗಿರಿ ಪ್ರಕರಣ: ಓರ್ವ ಶಂಕಿತ ವ್ಯಕ್ತಿಯ ಬಂಧನ

|

Updated on: Aug 13, 2023 | 7:48 PM

Mangaluru News: ನೈತಿಕ ಪೊಲೀಸ್​ ಗಿರಿ ಶಂಕಿತ​​ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕೇರಳದ ಮಲಪ್ಪುರಂ ಮೂಲದ ಮೊಹಮ್ಮದ್ ಜಲೀಲ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮಂಗಳೂರು: ನೈತಿಕ ಪೊಲೀಸ್‌ಗಿರಿ ಪ್ರಕರಣ: ಓರ್ವ ಶಂಕಿತ ವ್ಯಕ್ತಿಯ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು, ಆಗಸ್ಟ್​ 13: ನೈತಿಕ ಪೊಲೀಸ್​ ಗಿರಿ (moral policing) ಶಂಕಿತ​​ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸುಳ್ಯ ಸೊಣಂಗೇರಿ ನಿವಾಸಿ ಪುನೀತ್​ ಬಂಧಿತ ಆರೋಪಿ. ಕೇರಳದ ಮಲಪ್ಪುರಂ ಮೂಲದ ಮೊಹಮ್ಮದ್ ಜಲೀಲ್ (39) ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಈ ಕುರಿತಾಗಿ ಸುಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಜಲೀಲ್​ ಅವರು ಸುಳ್ಯದ ಅರಂತೋಡು ಎಂಬಲ್ಲಿ ಮೂರು ತಿಂಗಳ ಹಿಂದೆ ರಬ್ಬರ್ ತೋಟವನ್ನು ಗುತ್ತಿಗೆಗೆ ತೆಗೆದುಕೊಂಡು ಅಲ್ಲಿಯೇ ನೆಲೆಸಿದ್ದರು.

ಶನಿವಾರ ಅವರಿಗೆ ಪರಿಚಿತ ಮಹಿಳೆಯೊಬ್ಬರು ಮಡಿಕೇರಿಯಿಂದ ಸುಳ್ಯಕ್ಕೆ ಆಗಮಿಸುತ್ತಿದ್ದು, ವಿಶ್ರಾಂತಿ ಪಡೆಯಲು ರೂಂ ಬೇಕೆಂದು ಸಹಾಯ ಕೇಳಿದ್ದಾರೆ. ಸುಳ್ಯದಲ್ಲಿ ಮಹಿಳೆಗೆ ಕೊಠಡಿ ವ್ಯವಸ್ಥೆ ಮಾಡಿ, ತೊಡಿಕಾನಕ್ಕೆ ತೆರಳಿದ್ದಾಗ ಐದು ಜನರ ತಂಡವೊಂದು ಕಾರು ಹಾಗೂ ಸ್ಕೂಟರ್‌ನಲ್ಲಿ ಆಗಮಿಸಿದ್ದಾರೆ. ಮೊಹಮ್ಮದ್ ಜಲೀಲ್​ನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡುವುದರೊಂದಿಗೆ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: NIA Raid: ಕರ್ನಾಟಕ ಸೇರಿದಂತೆ 5 ರಾಜ್ಯಗಳ 14 ಕಡೆ ಏಕಕಾಲಕ್ಕೆ ಎನ್​ಐಎ ದಾಳಿ

ಐದು ಜನರ ಪೈಕಿ ಲತೀಶ್ ಗುಂಡ್ಯ, ವರ್ಷಿತ್ ಮತ್ತು ಪುನೀತ್ ಎಂಬ ಮೂವರ ಹೆಸರನ್ನು ಪ್ರಕರಣದಲ್ಲಿ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸರು ಐಪಿಸಿ ಸೆಕ್ಷನ್ 143, 147, 341, 323, 504, 153 (ಎ) ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

ಇತ್ತೀಚೆಗೆ ಮಂಗಳೂರು ಹೊರವಲಯದ ಸೋಮೇಶ್ವರ ಬೀಚ್ ಬಳಿ ಸಂಜೆ 5.30 ರ ಸುಮಾರಿಗೆ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಕೇರಳ ಮೂಲದ ಮೂವರು ಮುಸ್ಲಿಂ ಯುವಕರ ಮೇಲೆ ಹಲ್ಲೆ ಮಾಡಲಾಗಿತ್ತು. ಮೂವರು ಹಿಂದು ವಿದ್ಯಾರ್ಥಿನಿಯರೊಂದಿಗೆ ಬಂದಿದ್ದ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ ನಡೆದಿತ್ತು. ನಗರದ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಕೇರಳ ಕಾಸರಗೋಡು ಮೂವರು ವಿದ್ಯಾರ್ಥಿನಿಯರೊಂದಿಗೆ ಯುವಕರು ಬಂದಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟ್ ಅಕ್ರಮ; ಜಿ.ಆರ್.ಮೆಡಿಕಲ್ ಕಾಲೇಜು ವಿರುದ್ಧ ಗಂಭೀರ ಆರೋಪ

ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಹಿಂಬಾಲಿಸಿತ್ತು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿತ್ತು. ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭ ತಂಡದಿಂದ ಹಲ್ಲೆಯಾಗಿತ್ತು.

ಕೇರಳದ ಚೆರ್ಕಳದ ಹಾಗೂ ಕಾಸರಗೋಡಿನ ಯುವಕರಾಗಿದ್ದು, ಎಲ್ಲರು ಮಂಗಳೂರಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಾಗಿದ್ದರು. ಹಲ್ಲೆಯಲ್ಲಿ ಮೂವರು ಯುವಕರು ಗಾಯಗೊಂಡಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾಫರ್ ಶರೀಫ್, ಮುಜೀಬ್ , ಆಶಿಕ್ ಗಾಯ ಗೊಂಡಿದ್ದರು.

ಜತೆಗಿದ್ದ ಮೂವರು ವಿದ್ಯಾರ್ಥಿನಿಯರು ಕೇರಳಕ್ಕೆ ತೆರಳಿದ್ದಾರೆ ಅನ್ನೊ ಮಾಹಿತಿ ಸಿಕ್ಕಿತ್ತು. ಮಾಹಿತಿ ಪಡೆದ ಉಳ್ಳಾಲ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದರು. ಹಲ್ಲೆ ನಡೆಸಿದ ಯುವಕರ ತಂಡದ ಬಗ್ಗೆ ಮಾಹಿತಿ ಕಲೆಹಾಕಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.