ಬೆಂಗಳೂರು: ಬೆಂಗಳೂರಿನ (Bengaluru) ಹೊಸಗುಡ್ಡದಹಳ್ಳಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ ಮತ್ತು ಮಗನ ಮೃತದೇಹ ಪತ್ತೆಯಾಗಿವೆ. ಲಕ್ಷ್ಮಮ್ಮ (48) ಮದನ್ (13) ಮೃತ ದುರ್ದೈವಿಗಳು. ಮಗನನ್ನ ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯಾಹ್ನ 2.15ರ ಸುಮಾರಿಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ಹೊಸಗುಡ್ಡದಹಳ್ಳಿಯಲ್ಲಿರುವ ಲಕ್ಷ್ಮಮ್ಮ ಮತ್ತು ಅವರ ಮಗ ಮದನ್ ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಶ್ಚಿಮ ಬೆಂಗಳೂರು ಉಪ ಪೊಲೀಸ್ ಆಯುಕ್ತ ಲಕ್ಷ್ಮಣ್ ಬಿ ನಿಂಬರಗಿ ತಿಳಿಸಿದ್ದಾರೆ.
ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಕೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಶಿವಮೊಗ್ಗ: ಅಪ್ರಾಪ್ತ ಸ್ನೇಹಿತರ ನಡುವೆ ಕಾದಾಟ, ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕು ಇರಿತ
ಶಿವಮೊಗ್ಗ: ಶಿವಮೊಗ್ಗದ ಬಾಪೂಜಿ ನಗರದಲ್ಲಿ ಅಪ್ರಾಪ್ತ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಅಪ್ರಾಪ್ತ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. 17 ವರ್ಷದ ಬಾಲಕ 14 ವರ್ಷದ ಬಾಲಕನನ್ನ ಥಳಿಸಿದ್ದನು. ಗಲಾಟೆ ನೋಡಿದ 14 ವರ್ಷದ ಬಾಲಕನ ಚಿಕ್ಕಪ್ಪ ತೇಜಸ್ ಹಲ್ಲೆ ಮಾಡಿದ 17 ವರ್ಷದ ಬಾಲಕನಿಗೆ ಥಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ 17 ವರ್ಷದ ಬಾಲಕ ಮತ್ತೋರ್ವ ಯುವಕ ಆರೀಫ್ನಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾನೆ.
ಸ್ಥಳಕ್ಕೆ ಬಂದ ಆರೀಫ್ 17 ವರ್ಷದ ಬಾಲಕನೊಂದಿಗೆ ಸೇರಿ ತೇಜಸ್ ವಿರುದ್ಧ ಮುಗಿಬಿದ್ದಿದ್ದಾರೆ. ಈ ವೇಳೆ ತೇಜಸ್ಗೆ ಚಾಕು ನಿಂದ ದಾಳಿ ಮಾಡಲಾಗಿದೆ. ಹಲ್ಲೆಗೊಳಗಾದ ತೇಜಸ್ರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೆ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಲಾಟೆ ಮಾಡಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Wed, 14 September 22