ಬೆಂಗಳೂರು: ನಗರದಲ್ಲಿ ಭಾರಿ ಡ್ರಗ್ಸ್ ಜಾಲ ಪತ್ತೆಯಾಗಿದ್ದು ಇದೀಗ ಕೆಲವು ಪ್ರಮುಖ ಸಂಗೀತಗಾರರು ಹಾಗೂ, ನಟ-ನಟಿಯರ ಮೇಲೆ NCB ಕಣ್ಣು ಇಟ್ಟಿದೆ. ಜೊತೆಗೆ, ಡ್ರಗ್ಸ್ ಜಾಲದಲ್ಲಿ ಸಿಲುಕಿರುವವರ ಬಗ್ಗೆ ತನಿಖೆ ಸಹ ನಡೆಸುತ್ತಿದೆ.
ಕಲ್ಯಾಣನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ MDMA ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದ NCBಗೆ ಇದೀಗ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೆ 96 MDMA ಮಾತ್ರೆಗಳ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಸಮಾಜದ ಪ್ರಮುಖ ವ್ಯಕ್ತಿಗಳು, ಪ್ರಭಾವಿಗಳು, ಸಂಗೀತಗಾರರು, ನಟರು ಮತ್ತು ವಿದ್ಯಾರ್ಥಿಗಳ ಕೈವಾಡ ಪತ್ತೆಯಾಗಿದ್ದು ಈ ಪ್ರಕರಣದಲ್ಲಿ ಇನ್ನೂ ಕೆಲವು ವ್ಯಕ್ತಿಗಳ ಬಂಧನದ ಸಾಧ್ಯತೆಯಿದೆ ಎಂದು NCB ಬೆಂಗಳೂರಿನ ಉಪನಿರ್ದೇಶಕ KPS ಮಲ್ಹೋತ್ರಾ ಹೇಳಿಕೆ ನೀಡಿದ್ದಾರೆ.
ಆಗಸ್ಟ್ ತಿಂಗಳ ಆರಂಭದಲ್ಲಿ ಕೆ.ರೆಹಮಾನ್ ಎಂಬಾತನನ್ನು ಬಂಧಿಸಿದ್ದ NCB ಈತ MDMA ಸೇರಿ ಇತರೆ ಡ್ರಗ್ಸ್ ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಎಂದು KPS ಮಲ್ಹೋತ್ರಾ ತಿಳಿಸಿದ್ದಾರೆ. ಜೊತೆಗೆ, MDMA ಮಾತ್ರೆಗಳ ಬದಲಿಗೆ ಗ್ರಾಹಕರಿಂದ ಬಿಟ್ ಕಾಯಿನ್ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಈ ಮಾತ್ರೆಗಳನ್ನು ರೇವ್ ಪಾರ್ಟಿಗಳಲ್ಲಿ ಬಳಸಲಾಗುತ್ತಿದ್ದು ಇದರ ಸೇವನೆಯಿಂದ ಜನರಲ್ಲಿ ಶಕ್ತಿ ಹೆಚ್ಚಾದಂತೆ ಭಾಸವಾಗುತ್ತದೆ ಹಾಗೂ ಖುಷಿ ಸಿಕ್ಕಿರುವ ಅನುಭವದಲ್ಲಿ ಇರುತ್ತಾರೆಂ. MDMAಯ ಒಂದು ಮಾತ್ರೆಗೆ 1,500ರಿಂದ 2 ಸಾವಿರ ರೂಪಾಯಿ ಬೆಲೆ ಇದೆ ಎಂದು NCB ಬೆಂಗಳೂರಿನ ಉಪನಿರ್ದೇಶಕ KPS ಮಲ್ಹೋತ್ರಾ ಹೇಳಿಕೆ ನೀಡಿದ್ದಾರೆ.
Published On - 2:03 pm, Thu, 27 August 20