ಬೆಂಗಳೂರು: ಕಳೆದ ವರ್ಷ PUBG ಗೇಮ್ಗಾಗಿ ತನ್ನ ತಂದೆಯನ್ನೇ ಕೊಂದಿದ್ದ ಆರೋಪಿ, ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ತನ್ನ ಹುಚ್ಚಾಟ ಪ್ರದರ್ಶಿಸಿದ್ದಾನೆ.
ಹೌದು.. ಕಳೆದ ವರ್ಷ ಬೆಳಗಾವಿಯಲ್ಲಿ ರಘುವೀರ್ ಎಂಬಾತ PUBG ಗೇಮ್ ಆಡದಂತೆ ಬುದ್ದಿವಾದ ಹೇಳಿದ ತನ್ನ ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದ. ಇದಾದ ಬಳಿಕ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಬಳಿಕ ಬುದ್ದಿ ಕಲಿಯದ ಭೂಪ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ.
ದೊಮ್ಮಲೂರಿನ ಖಾಸಗಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ಅತಿಕ್ರಮ ಪ್ರವೇಶ ಮಾಡಿದ ರಘುವೀರ್, ಮನೆಯಲ್ಲಿದ್ದ ಮದ್ಯ ಕಂಡು, ಅಲ್ಲೇ ಕುಡಿದು ಟೈಟ್ ಆಗಿದ್ದಾನೆ. ಈ ವೇಳೆ ಬಂದ ಮನೆ ಕೆಲಸದಾಕಿಗೆ ರಘುವೀರ್ ಸಿಕ್ಕಿ ಬಿದ್ದಿದ್ದಾನೆ. ಮನೆಯಲ್ಲಿದ್ದ ಚಿನ್ನದ ಲಾಕರ್ ಓಪನ್ ಮಾಡಿದ್ದರೂ ಸಹ ರಘುವೀರ್ ಚಿನ್ನವನ್ನು ಮುಟ್ಟಿಲ್ಲ. ಕೂಡಲೇ ಕೆಲಸದಾಕೆ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಅಸಲಿಗೆ ಮನೆಗೆ ಹೋಗಿದ್ದ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ತಿಂಗಳ 30 ರಂದು ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದ್ದು, ಫ್ಲ್ಯಾಟ್ನ ಮಾಲೀಕ ಕುಟುಂಬ ಸಮೇತ ಗೋವಾಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಗಮನಕ್ಕೆ ಬಾರದಂತೆ ಎಂಟ್ರಿ ಕೊಟ್ಟಿದ್ದ ರಘುವೀರ್, ನಕಲಿ ಐಡಿ ತೋರಿಸಿ ಕೀ ಪಡೆದು ಮನೆಯೊಳಗೆ ಎಂಟ್ರಿ ಕೊಟ್ಟಿದ್ದ. ಬಳಿಕ ಮನೆಯಲ್ಲಿದ್ದ ಫ್ರಿಡ್ಜ್ ಓಪನ್ ಮಾಡಿ ಮದ್ಯ ತೆಗೆದು, ಕಂಠಪೂರ್ತಿ ಕುಡಿದು ಅಲ್ಲೇ ಇದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.