ಬೆಂಗಳೂರು: ಫೆಬ್ರವರಿ 9ರಂದು ನಗರದ ಮೇಖ್ರಿ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಸಂಬಂಧ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ಗೆ ಸದಾಶಿವನಗರ ಸಂಚಾರಿ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಫೆ.9ರಂದು ಲ್ಯಾಂಬೋರ್ಗಿನಿ ಕಾರಿನಿಂದ ಸರಣಿ ಅಪಘಾತವಾಗಿತ್ತು. ಘಟನೆಯಲ್ಲಿ ಬೈಕ್ ಸವಾರ ಪ್ರಫುಲ್ ಎಂಬಾತನ ಕಾಲು ಮೂಳೆ ಮುರಿದಿತ್ತು. ಅಪಘಾತದ ಬಳಿಕ ದುಬಾರಿ ಕಾರನ್ನ ಬಿಟ್ಟು ಚಾಲಕ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸದಾಶಿವನಗರ ಪೊಲೀಸರು ಕಾರನ್ನು ಜಪ್ತಿ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಪ್ರಕರಣ ಬೆನ್ನು ಹತ್ತಿದ ಪೊಲೀಸರು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಟೆಕ್ನಿಕಲ್ ಸಾಕ್ಷ್ಯಗಳನ್ನ ಆಧರಿಸಿ ತನಿಖೆ ನಡೆಸಿದ್ದಾರೆ.
ಈ ನಡುವೆ ಅಪಘಾತ ಮಾಡಿದ್ದು ತಾನೇ ಎಂದು ಓರ್ವ ವ್ಯಕ್ತಿ ಮುಂದೆ ಬಂದಿದ್ದ. ಆದ್ರೆ ಸಾಕ್ಷ್ಯಾಧಾರಗಳಿಂದ ಕಾರು ಚಲಾಯಿಸುತ್ತಿದ್ದದ್ದು ಮಹಮ್ಮದ್ ನಲಪಾಡ್ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಸಂಚಾರಿ ಠಾಣೆ ಪೊಲೀಸರಿಂದ ನಲಪಾಡ್ಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಕಾರು ಚಾಲನೆ ಮಾಡಿದ್ದು ನಲಪಾಡ್
ಖಚಿತವಾದ ಸಾಕ್ಷ್ಯ, ಆಧಾರಗಳ ಮೇಲೆ ಮೊಹಮದ್ ನಲಪಾಡ್ ಕಾರು ಚಾಲನೆ ಮಾಡುತ್ತಿದ್ದ ಎಂಬುದು ಖಚಿತವಾಗಿ ತಿಳಿದುಬಂದಿದೆ. ಹಾಗಾಗಿ ನಲಪಾಡ್ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದೇವೆ. ವಿಚಾರಣೆಗೆ ಹಾಜರಾದ ನಂತರ ಪ್ರಕರಣ ಸಂಬಂಧ ಮುಂದಿನ ತನಿಖೆ ಕೈಗೊಳ್ಳುತ್ತೇವೆ ಎಂದು ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇ ಗೌಡ ಹೇಳಿದ್ದಾರೆ.
ಇದು ಸಣ್ಣ ಆಕ್ಸಿಡೆಂಟ್ ಅಷ್ಟೆ:
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅಪಘಾತ ಸಂಬಂಧ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಶಾಸಕರ ಮಗ ಇರಬಹುದು ಅಥವಾ ಶಾಸಕರೇ ಆಗಿರಬಹುದು ಕಾನೂನುಬಾಹಿರವಾಗಿ ವರ್ತನೆ ಮಾಡಿದರೆ ಕ್ರಮ ಕೈಗೊಳ್ಳಬೇಕು. ಇದು ಸಣ್ಣ ಆಕ್ಸಿಡೆಂಟ್ ಅಷ್ಟೇ, ದೊಡ್ಡ ಆಕ್ಸಿಡೆಂಟ್ ಅಲ್ಲ ಎಂದಿದ್ದಾರೆ.
ಮಾಧ್ಯಮಗಳಿಗೆ ಸೆಲ್ಯೂಟ್ ಹೊಡೆದ ಶಾಸಕ ಹ್ಯಾರಿಸ್:
ಮೇಖ್ರಿ ಸರ್ಕಲ್ ಬಳಿ ಐಷಾರಾಮಿ ಕಾರು ಅಪಘಾತ ಪ್ರಕರಣದಲ್ಲಿ ಪುತ್ರ ನಲಪಾಡ್ ಕಾರು ಚಾಲನೆ ಬಗ್ಗೆ ಪ್ರತಿಕ್ರಿಯೆಗೆ ಶಾಸಕ ಹ್ಯಾರಿಸ್ ನಿರಾಕರಿಸಿದ್ದಾರೆ. ಮಾಧ್ಯಮಗಳಿಗೆ ನಮಸ್ಕಾರ ಹೊಡೆದು ಹೊರಟ ಶಾಸಕ ಹ್ಯಾರಿಸ್, ಕೆಪಿಸಿಸಿ ಕಚೇರಿಯಲ್ಲಿ ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Published On - 4:27 pm, Tue, 11 February 20