ದೆಹಲಿ: ದೆಹಲಿಯಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ(live-in partner) ತನ್ನ ಸಂಗಾತಿಯನ್ನು ಕೊಂದ 28ರ ಹರೆಯದ ವ್ಯಕ್ತಿ ತನ್ನ ಪ್ರೇಯಸಿ ಮೃತದೇಹವನ್ನು ಕತ್ತರಿಸಿ ಅದನ್ನಿರಿಸಲು ಹೊಸ ರೆಫ್ರಿಜರೇಟರ್ ಖರೀದಿಸಿದ್ದ. ನಂತರ ಮೃತದೇಹದ ಒಂದೊಂದು ತುಂಡುಗಳನ್ನು ನಗರದ ಮೆಹ್ರೌಲಿ (Mehrauli) ಅರಣ್ಯದಾದ್ಯಂತ ಚದುರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿನ ದುರ್ವಾಸನೆ ಹೋಗಲಾಡಿಸಲು ಆತ ಅಗರಬತ್ತಿ ಹಚ್ಚುತ್ತಿದ್ದ. ಈ ಕೃತ್ಯ ನಡೆಸಿದ ಆತನಿಗೆ ಅಮೆರಿಕದ ಕ್ರೈಂ ಶೋ ‘ಡೆಕ್ಸ್ಟರ್’ (Dexter)ಸ್ಫೂರ್ತಿಯಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತ ತನ್ನ 26ರ ಹರೆಯದ ಗೆಳತಿ ಶ್ರದ್ಧಾ ವಾಕರ್ ಳನ್ನು ಕೊಂದು ದೇಹವನ್ನು ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದನು. ಮಗಳು ಫೋನ್ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶ್ರದ್ಧಾಳ ತಂದೆ ಮಹಾರಾಷ್ಟ್ರದಿಂದ ದೆಹಲಿಗೆ ಬಂದು ಅಪಹರಣ ದೂರು ದಾಖಲಿಸಿದ ನಂತರ ಪೂನಾವಾಲನನ್ನು ಶನಿವಾರ ಬಂಧಿಸಲಾಯಿತು. ಶ್ರದ್ಧಾ ಮದುವೆಯಾಗು ಎಂದು ಒತ್ತಾಯಿಸಿದ್ದರಿಂದ ಐದು ತಿಂಗಳ ಹಿಂದೆ, ಮೇ 18 ರಂದು ಆತ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಪೂನಾವಾಲ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇಡಲು 300 ಲೀಟರ್ ಫ್ರಿಜ್ ಖರೀದಿಸಿದ್ದ. ನಂತರ 18 ದಿನಗಳ ಕಾಲ ಆತ ಮೆಹ್ರೌಲಿ ಅರಣ್ಯದಲ್ಲಿ ಮೃತದೇಹದ ತುಂಡುಗಳನ್ನು ಬಿಸಾಡಿದ್ದಾನೆ. ಈ ರೀತಿ ಮೃತದೇಹವನ್ನು ಬಿಸಾಡಲು ಆತ ಧ್ಯರಾತ್ರಿ 2 ಗಂಟೆಯ ನಂತರ ಹೊರಗೆ ಹೋಗುತ್ತಿದ್ದ ಎನ್ನಲಾಗಿದೆ.
ಈ ಪ್ರಕರಣವು ‘ಡೆಕ್ಸ್ಟರ್’ ಶೋನಲ್ಲಿನ ಕಾಲ್ಪನಿಕ ಕಥೆಗಳ ಅಂಶಗಳನ್ನು ಹೊಂದಿದೆ. ಇದರಲ್ಲಿ ನಾಯಕನು ವಿಧಿವಿಜ್ಞಾನ ಪರಿಣಿತನಾಗಿದ್ದು, ಸರಣಿ ಕೊಲೆಗಳನ್ನು ನಡೆಸುತ್ತಿರುತ್ತಾನೆ. ಅಫ್ತಾಬ್ ಬಾಣಸಿಗನಾಗಿ ತರಬೇತಿ ಪಡೆದಿದ್ದರಿಂದ ಮಾಂಸದ ಚಾಕುವನ್ನು ಬಳಸುವುದರಲ್ಲಿ ನಿಪುಣನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಮತ್ತು ಪೂನಾವಾಲ ಮುಂಬೈನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಭೇಟಿಯಾಗಿದ್ದರು. ಶ್ರದ್ಧಾಳ ಕುಟುಂಬವು ಅವರ ಅಂತರ-ಧರ್ಮೀಯ (ಹಿಂದೂ-ಮುಸ್ಲಿಂ) ಸಂಬಂಧವನ್ನು ಒಪ್ಪದ ನಂತರ ಈ ವರ್ಷದ ಆರಂಭದಲ್ಲಿ ದೆಹಲಿಗೆ ತೆರಳಿದರು. ದೆಹಲಿಯಲ್ಲಿ ಆಕೆ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಮೆಹ್ರಾಲಿಯಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು.
“ಮದುವೆ ವಿಚಾರದಲ್ಲಿ ಮೇ ಮಧ್ಯದಲ್ಲಿ ಅವರಿಬ್ಬರ ನಡುವೆ ಜಗಳವಾಗಿತ್ತು. ಈ ಸಿಟ್ಟಿನಲ್ಲಿ ಆತ ಆಕೆಕತ್ತು ಹಿಸುಕಿದನು” ಎಂದು ದೆಹಲಿ ದಕ್ಷಿಣದ ಪೊಲೀಸ್ ಉಸ್ತುವಾರಿ ಅಂಕಿತ್ ಚೌಹಾಣ್ ಹೇಳಿದ್ದಾರೆ.
ಹಲವು ವಾರಗಳಿಂದ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ಸ್ನೇಹಿತರೊಬ್ಬರು ತಿಳಿಸಿದ ನಂತರ ಮಹಿಳೆಯ ತಂದೆ ವಾಸೈನಿಂದ ದೆಹಲಿಗೆ ಬಂದರು. ಆಕೆಯ ಲಿವ್-ಇನ್ ಸಂಬಂಧದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಶ್ರದ್ದಾ ಮತ್ತು ಆಕೆಯ ಕುಟುಂಬ ಪರಸ್ಪರ ಮಾತನಾಡುತ್ತಿರಲಿಲ್ಲ ಎಂದು ಆಕೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಐದು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಅರಣ್ಯದಿಂದ ಕೆಲವು ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಆದರೆ ಅವು ಮಾನವ ಅವಶೇಷಗಳೇ ಎಂದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಬಳಸಿದ್ದ ಚಾಕು ಇನ್ನೂ ಪತ್ತೆಯಾಗಿಲ್ಲ.
Published On - 7:40 pm, Mon, 14 November 22