ಈ ಅಪ್ರಾಪ್ತ ಬಾಲಕಿ ಅನುಭವಿಸಿದ ಲೈಂಗಿಕ ಹಿಂಸೆ ಮತ್ತು ಸಾವಿಗೆ ನ್ಯಾಯ ದೊರಕೀತೆ?

|

Updated on: Aug 13, 2020 | 9:08 PM

ತೆಲಂಗಾಣದ ಸಂಗಾರೆಡ್ಡಿ‌ ಜಿಲ್ಲೆಯ ಅಮೀನಪುರದಲ್ಲಿ‌‌ ನಡೆದಿರುವ ಅತ್ಯಂತ ದಾರುಣ ಮತ್ತು ಹೇಯಕರ ಘಟನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸುಮಾರು ಒಂದು ವರ್ಷಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಗಾಗಿ, ಗರ್ಭವೂ ಧರಿಸಿ, ಅಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ನತದೃಷ್ಟ ಬಾಲಕಿಯ ಸಂಬಂಧಿಕರು ಆಕೆಯನ್ನು, ಅಮೀನಪುರದಲ್ಲಿರುವ ಮಾರುತಿ ಅನಾಥಾಶ್ರಮಕ್ಕೆ ಸೇರಿಸಿದ್ದರು. ಸದರಿ ಆಶ್ರಮದ ಮೇಲ್ವಿಚಾರಣೆಗಾಗಿ ವೇಣುಗೋಪಾಲ ಎಂಬ ಹೆಸರಿನ ರಾಕ್ಷಸೀ ಪ್ರವೃತ್ತಿಯ ವಿಕೃತಕಾಮಿಯನ್ನು ನೇಮಿಸಲಾಗಿದೆ. ಬಾಲಕಿಗೆ ಹಿಂದೆಮುಂದೆ ಯಾರೂ ಇಲ್ಲ ಎಂಬುದನ್ನು ಮನಗಂಡಿದ್ದ ಈ ಕಾಮುಕ ಅವಳಿಗೆ ನೀಡುತ್ತಿದ್ದ ಆಹಾರದಲ್ಲಿ […]

ಈ ಅಪ್ರಾಪ್ತ ಬಾಲಕಿ ಅನುಭವಿಸಿದ ಲೈಂಗಿಕ ಹಿಂಸೆ ಮತ್ತು ಸಾವಿಗೆ ನ್ಯಾಯ ದೊರಕೀತೆ?
ಸಾಂದರ್ಭಿಕ ಚಿತ್ರ
Follow us on

ತೆಲಂಗಾಣದ ಸಂಗಾರೆಡ್ಡಿ‌ ಜಿಲ್ಲೆಯ ಅಮೀನಪುರದಲ್ಲಿ‌‌ ನಡೆದಿರುವ ಅತ್ಯಂತ ದಾರುಣ ಮತ್ತು ಹೇಯಕರ ಘಟನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸುಮಾರು ಒಂದು ವರ್ಷಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಗಾಗಿ, ಗರ್ಭವೂ ಧರಿಸಿ, ಅಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.

ತಂದೆತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ನತದೃಷ್ಟ ಬಾಲಕಿಯ ಸಂಬಂಧಿಕರು ಆಕೆಯನ್ನು, ಅಮೀನಪುರದಲ್ಲಿರುವ ಮಾರುತಿ ಅನಾಥಾಶ್ರಮಕ್ಕೆ ಸೇರಿಸಿದ್ದರು. ಸದರಿ ಆಶ್ರಮದ ಮೇಲ್ವಿಚಾರಣೆಗಾಗಿ ವೇಣುಗೋಪಾಲ ಎಂಬ ಹೆಸರಿನ ರಾಕ್ಷಸೀ ಪ್ರವೃತ್ತಿಯ ವಿಕೃತಕಾಮಿಯನ್ನು ನೇಮಿಸಲಾಗಿದೆ.

ಬಾಲಕಿಗೆ ಹಿಂದೆಮುಂದೆ ಯಾರೂ ಇಲ್ಲ ಎಂಬುದನ್ನು ಮನಗಂಡಿದ್ದ ಈ ಕಾಮುಕ ಅವಳಿಗೆ ನೀಡುತ್ತಿದ್ದ ಆಹಾರದಲ್ಲಿ ಮತ್ತು ಬರಿಸುವ ಪದಾರ್ಥವನ್ನು ಬೆರೆಸುತ್ತಿದ್ದ. ಆಹಾರ ಸೇವಿಸಿದ ನಂತರ ಗಾಢ ನಿದ್ರೆಗೆ ಜಾರುತ್ತಿದ್ದ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ. ಒಂದೆರಡು ದಿನಗಳ ನಂತರ ಅವಳಿಗೆ ತನ್ನ ದೇಹದ ಮೇಲೆ ನಡೆಯುತ್ತಿದ್ದ ಹಿಂಸೆ ಗಮನಕ್ಕೆ ಬಂದಿತ್ತು. ಅವಳು ಪ್ರತಿಭಟಿಸಿದಾಗ, ಕೊಂದು ಹಾಕುವುದಾಗಿ ಬೆದರಿಸಿ, ವೇಣುಗೋಪಾಲ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸಿದ್ದ. ಶೋಷಿತ ಬಾಲಕಿಯ ಸಂಬಂಧಿಕರು ಹೇಳುವ ಪ್ರಕಾರ ಅವಳು ಒಂದು ವರ್ಷದವರೆಗೆ ತನ್ನ ಪುಟ್ಟ ದೇಹದ ಮೇಲೆ ನಡೆಯುತ್ತಿದ್ದ ಲೈಂಗಿಕ ಹಿಂಸೆಯನ್ನು ಮೌನವಾಗಿ ಸಹಿಸಿಕೊಂಡಿದ್ದಾಳೆ.

ಕೊನೆಗೊಂದು ದಿನ ಅವಳು ಗರ್ಭಿಣಿಯಾಗಿರುವುದನ್ನು ಮನಗಂಡ ಕಾಮಪಿಪಾಸು, ಸಂಬಂಧಿಕರ ಬಳಿಗೆ ಅವಳನ್ನು ಕರೆದೊಯ್ದು, ಅವಳ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಗರ್ಭಿಣಿ ಬಾಲಕಿಯನ್ನು ಅವರಲ್ಲಿ ಬಿಟ್ಟು ವಾಪಸ್ಸಾಗಿದ್ದಾನೆ.

ಗಾಬರಿಗೊಂಡ ಸಂಬಂಧಿಕರು ಆಕೆಯನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋದಾಗ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಹೇಗೆ, ಏನು ಅಂತ ವಿಚಾರಿಸಿದಾಗ ಅವಳು ರೋದಿಸುತ್ತಾ ಎಲ್ಲವನ್ನೂ ಹೇಳಿದ್ದಾಳೆ. ಬಹಳ ಗಂಭೀರ ಸ್ಥಿತಿಯಲ್ಲಿದ್ದ ಅವಳನ್ನು ಉಳಿಸುವ ಪ್ರಯತ್ನ ವೈದ್ಯರು ಮಾಡಿದರಾದರೂ ಅದು ಸಫಲವಾಗಲಿಲ್ಲ. ವರ್ಷವಿಡೀ ಹಲ್ಲೆಗೊಳಗಾಗಿ ನಿಸ್ತೇಜಿತಳಾಗಿದ್ದ ಹುಡುಗಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು.

ಅವಳ ಸಂಬಂಧಿಕರು ಪೊಲೀಸ್ ಮತ್ತು ಮಹಿಳಾ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಪ್ರತಿಭಟನೆ ನಡೆಸಿದ ನಂತರ ಪೋಲಿಸರು, ವೇಣುಗೋಪಾಲ ಹಾಗೂ ಅವನ ಪಾಶವೀ ಕೃತ್ಯಕ್ಕೆ ಸಹಾಯ ಮಾಡಿದರೆನ್ನಲಾಗಿರುವ ಅನಾಥಾಶ್ರಮದ ಇಬ್ಬರು ನಿರ್ವಾಹಕರನ್ನು ಬಂಧಿಸಿದ್ದಾರೆ. ಈ ರಾಕ್ಷಸನಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಒಬ್ಬ ವಿಕೃತಕಾಮಿಯ ಲೈಂಗಿಕ ತೃಷೆಗೆ ಅಮಾಯಕ ಹಾಗೂ ಅಪ್ರಾಪ್ತ ಬಾಲಕಿಯೊಬ್ಬಳು ಬಲಿಯಾಗಿರುವುದನ್ನು ಮಾತ್ರ ನಾಗರಿಕ ಸಮಾಜ ಯಾವತ್ತೂ ಕ್ಷಮಿಸಲಾರದು.