
ಹಾವೇರಿ, ಜೂನ್ 24: ಶಿಗ್ಗಾಂವಿ (Shiggaon) ಪಟ್ಟಣದ ಹೊರವಲಯದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪ್ರಥಮ ದರ್ಜೆಯ ಗುತ್ತಿಗೆದಾರ (Contractor) ಶಿವಾನಂದ ಕುನ್ನೂರು (40 ವರ್ಷ) ಕೊಲೆಯಾದವರು. ಹಾವೇರಿ (Haveri) ಎಸ್ಪಿ ಅಂಶುಕುಮಾರ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಾನಂದ ಕುನ್ನೂರು ಹೊಟೇಲ್ನಲ್ಲಿ ಊಟ ಮಾಡಿ ವಾಪಸ್ ಕಾರಿನಲ್ಲಿ ಹೋಗುತ್ತಿದ್ದ ವೇಳೆ 6 ರಿಂದ 7 ಜನರು ಅಟ್ಯಾಕ್ ಮಾಡಿ, ಕಬ್ಬಿಣದ ರಾಡ್ ಮತ್ತು ತಲಾವಾರ್ ನಿಂದು ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಸ್ತಿ ವ್ಯಾಜ್ಯದಿಂದ ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿತ್ರದುರ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹುಣುವಿನಡು ಗ್ರಾಮದಲ್ಲಿ ನಡೆದಿದೆ. ಆಟೋ ಚಾಲಕ ಶ್ರೀನಿವಾಸ್ (30) ಮೃತ ದುರ್ದೈವಿ. ಮೂರ್ನಾಲ್ಕು ಜನರಿದ್ದ ಗುಂಪು ಶ್ರೀನಿವಾಸ್ ಅವರನ್ನು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಶ್ರೀನಿವಾಸ್ ಅವರು ಹೊಳಲ್ಕೆರೆ ಮೂಲದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿರುವ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಮಂಗಳವಾರ (ಜೂ.24) ಬೆಳಗ್ಗೆ 11ಗಂಟೆ ಸುಮಾರಿಗೆ ಶ್ರೀನಿವಾಸ್ ಅವರ ಮನೆಯೊಳಗೆ ಏಕಾಏಕಿ ನುಗ್ಗಿ, ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಹಿಳೆಯ ಸಹೋದರ ಮತ್ತು ಸಂಬಂಧಿಕರು ಹತ್ಯೆ ಮಾಡಿರುವ ಅನುಮಾನವಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಂಗಳೂರಿನ ಮುನಿರೆಡ್ಡಿ ಲೇಔಟ್ನ ಮನೆಯೊಂದರಲ್ಲಿ ಕೊಲೆಯಾಗಿದೆ. ಉತ್ತರ ಪ್ರದೇಶ ಮೂಲದ ಶೈಲೇಶ್ ಯಾದವ್ ಕೊಲೆಯಾದವರು. ಬೀರೇಂದ್ರ ಯಾದವ್, ಸತೀಶ್, ಅರುಣ್ ಯಾದವ್ ಕೊಲೆ ಮಾಡಿದ ಆರೋಪಿಗಳು. ಆರೋಪಿ ಆರೋಪಿ ಬೀರೇಂದ್ರ ಯಾದವ್ ತನ್ನ ಅತ್ತಿಗೆ ಜತೆ ಅನೈತಿಕ ಸಂಬಂಧ ಹೊಂದಿದ್ದನು.
ಬೀರೇಂದ್ರ ಯಾದವ್ನ ಅಕ್ರಮ ಸಂಬಂಧದ ಬಗ್ಗೆ ಶೈಲೇಶ್ ಯಾದವ್ ಹೇಳಿಕೊಂಡು ಓಡುತ್ತಿದ್ದನು. ಈ ವಿಚಾರ ತಿಳಿದ ಆರೋಪಿ ಬೀರೇಂದ್ರ ಯಾದವ್ ಮೃತ ಶೈಲೇಶ್ ಯಾದವ್ನನ್ನು ಜೂನ್ 18ರಂದು ಸತೀಶ್ ಮನೆಗೆ ಕರೆಸಿಕೊಂಡು ಮೂವರು ಸೇರಿ ಥಳಿಸಿ ಕೊಲೆ ಮಾಡಿದ್ದಾರೆ.
ಸತೀಶ್ ಮನೆಯಲ್ಲೇ ಎರಡು ದಿನ ಶೈಲೇಶ್ ಯಾದವ್ ಶವ ಇರಿಸಿದ್ದಾರೆ. ಎರಡು ದಿನದ ನಂತರ ಶೈಲೇಶ್ ಯಾದವ್ ಮೃತಪಟ್ಟಿದ್ದಾನೆಂದು ಬಂಡೇಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಶೈಲೇಶ್ ಯಾದವ್ ಕೊಲೆಯಾಗಿದ್ದು ದೃಢವಾಗಿದೆ.
ಇದನ್ನೂ ಓದಿ: ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ
ಕೊಲೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಮತ್ತೊಬ್ಬ ಆರೋಪಿಗಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹತ್ಯೆಯಾದ ಶೈಲೇಶ್ ಮತ್ತು ಆರೋಪಿಗಳು ಉತ್ತರ ಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ