ಹೊನ್ನಾವರ: ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಭೀಕರ ಕೊಲೆ

ಆತ ಮಾನಸಿಕ ಅಸ್ವಸ್ಥ, ಕೆಲ ದಿನಗಳ ಹಿಂದಷ್ಟೇ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದ, ಮನೆಗೆ ಬಂದಾಗಿನಿಂದ ಕಾರಣವಿಲ್ಲದೆ ನಿತ್ಯ ಅವನ ತಂದೆ ಜೊತೆಗೆ ಜಗಳ ಮಾಡುತ್ತಿದ್ದ. ಇಂದು(ಏ.21) ಅದೇನಾಯಿತೋ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅವನ ಅಪ್ಪನ ತಲೆಗೆ ಹರಿತವಾದ ಅಸ್ತ್ರದಿಂದ ಭೀಕರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಹೊನ್ನಾವರ: ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಭೀಕರ ಕೊಲೆ
ಆರೋಪಿ ಭರತ್ ಮೇಸ್ತಾ

Updated on: Apr 22, 2023 | 11:05 AM

ಉತ್ತರ ಕನ್ನಡ: ಗಂಡು ಮಗು ಬೇಕು ಎಂದು ಕಂಡ ಕಂಡ ದೇವರಿಗೆ ಹರಿಕೆ ಹೊತ್ತು ಮಗನನ್ನ ಪಡೆದಿದ್ದ ಅಪ್ಪನಿಗೆ, ಇಂದು(ಏ.21) ಆ ಮಗನಿಂದಲೇ ತಾನು ಕೊಲೆ ಆಗುತ್ತೆನೆ ಎಂದು ಕನಸು ಮನಸ್ಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ. ಹೌದು ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ ನಡೆದು ಹೋಗಿದೆ. ಕಳೆದ ಏಳೆಂಟು ವರ್ಷಗಳಿಂದ ಮಗ ಭರತ್ ಮೇಸ್ತಾ ಮಾನಸಿಕ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ. ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗದ ಮಗನನ್ನ, ಮನೆಯಿಂದ ಆಚೆ ಬಿಡದೆ, ಮನೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಮಾತ್ರೆ, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯಲು ಹೇಳುತ್ತಿದ್ದ ಅಪ್ಪನನ್ನ ಇಂದು ಹರಿತವಾದ ಅಸ್ತ್ರದಿಂದ ತಲೆಗೆ ಹೊಡೆದು, ಕಿರಾತಕ ಮಗ ಕೊಂದೆ ಬಿಟ್ಟಿದ್ದಾನೆ.

ಅಂದ ಹಾಗೆ ಮಗನಿಗೆ ತಿಳಿ ಮಾತು ಹೇಳಿದ್ದೆ ತಪ್ಪಾಯಿತಾ. ತನ್ನ ಮಗ ಸಂಪೂರ್ಣ ಗುಣಮುಖನಾಗಿಲ್ಲ. ಹೊರೆಗೆ ಹೋದರೆ ಜನರೊಂದಿಗೆ ಜಗಳ ಮಾಡುತ್ತಾನೆ‌‌. ಎಲ್ಲರೂ ಹುಚ್ಚ ಎಂದು ಅಣಕಿಸುತ್ತಾರೆ. ಇದರಿಂದ ಅವನು ಮತ್ತಷ್ಟು ಕುಗ್ಗಬಹುದು ಎಂದು ತಂದೆ ಕಾಳಜಿಯನ್ನ ಲೆಕ್ಕಿಸದೆ, ಪಾಪಿ ಮಗ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಪಾಂಡುರಂಗ ಮೇಸ್ತಾನನ್ನ ಚಾಕುವಿನಿಂದ ಹಲ್ಲೆ ಮಾಡಿ, ನಂತರ ಗ್ರ್ಯಾಂಡರ್ ಸ್ಟಾಂಡ್‌ನಿಂದ ಭೀಕರವಾಗಿ ತಲೆಗೆ ಹೊಡೆದು ಕೊಂದಿದ್ದಾನೆ. ಈ ಕೊಲೆ ಕಂಡು ಇಡೀ ತೊಪ್ಪಲಕೇರಿ ಗ್ರಾಮ ಬೆಚ್ಚಿ ಬಿದ್ದಿದೆ.

ಇದನ್ನೂ ಓದಿ:ಪುತ್ತೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ವಿಚಾರಣಾಧೀನ ಕೈದಿ, ಪ್ರವೀಣ್ ನೆಟ್ಟಾರು ಕೊಲೆ ಆರೋಪಿ

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಭರತ್ ಮೇಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಡಿಪ್ಲೊಮಾದಲ್ಲಿ ಕೆಲ ವಿಷಯಗಳು ಉತ್ತೀರ್ಣವಾಗಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದ ಭರತ್ ಇಂದು ಔಷಧಿ ತೆಗೆದುಕೊ ಎಂದು ತಿಳಿ ಮಾತು ಹೇಳಿದ ತಂದೆಯನ್ನ ಕೊಲೆ ಮಾಡಿದ್ದಾನೆ..

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ