ಬೆಂಗಳೂರು: ಭ್ರಷ್ಟಾಚಾರ ಸಂಬಂಧ ಬಂದಿರುವ ಆರೋಪಕ್ಕೂ ಜಿಲ್ಲಾಧಿಕಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ (Manjunath) ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ದಾಳಿ ಸಂಬಂಧ ಈ ಹೇಳಿಕೆ ನೀಡಿದ್ದಾರೆ. ಇದೆಲ್ಲಾ ಸಂಪೂರ್ಣ ಸುಳ್ಳು. ನಮ್ಮ ಕಾರ್ಯವೈಖರಿ ಕಂಡರೆ ಕೆಲವರಿಗೆ ಆಗುವುದಿಲ್ಲ. ಹತ್ತು ಹಲವಾರು ಜಮೀನು ವಶಪಡಿಸಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಹೆಸರು ಕೆಡಿಸಲು ಕೆಲವರಿಂದ ಯತ್ನ ನಡೆಯುತ್ತಿದೆ. ಇದರ ಹಿಂದಿನ ಮುಖವಾಡ ಕಳಚಿಬೀಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್ ವಿರುದ್ದವೂ ದೂರುದಾರ ಅರೋಪ
ಬೆಂಗಳೂರು ನಗರ ಒಂದೂವರೆ ಕೋಟಿ ಜನಸಂಖ್ಯೆ ಇರುವ ಪ್ರದೇಶವಾಗಿದೆ. ಹೀಗಾಗಿ ಹತ್ತು ಹಲವಾರು ಸಮಸ್ಯೆಗಳು ಇರುತ್ತವೆ. ಅವುಗಳನೆಲ್ಲಾ ಇತ್ಯರ್ಥ ಮಾಡಿಕೊಂಡು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ಕಾರ್ಯ ವೈಖರಿ ಕಂಡು ಕೆಲವರಿಗೆ ಆಗುವುದಿಲ್ಲ. ಆರೋಪದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನೂ ಇಲ್ಲ. ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ದಾಖಲೆಗಳಿವೆ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.
ಒಬ್ಬ ವ್ಯಕ್ತಿ ಏನೋ ಹೇಳಿದ ಅಂದರೆ ಅದಕ್ಕೆ ಸಾಕ್ಷಿ ಆಧಾರಗಳು ಬೇಕು ಅಲ್ವಾ? ಆರೋಪ ಮಾಡೋದು ಸುಲಭ, ಸಾಕ್ಷಿ ಆಧಾರ ಇಲ್ಲದೆ ಒಬ್ಬರ ಮೇಲೆ ಕಳಂಕ ಹೊರಿಸೋದು ಎಷ್ಟು ಸರಿ? ಬಹಳ ಜನ ಅಭಿಮಾನ ಇಟ್ಟಿರುತ್ತಾರೆ, ಭರವಸೆ ಇಟ್ಟಿರುತ್ತಾರೆ, ನಂಬಿಕೆ ಇಟ್ಟಿರುತ್ತಾರೆ. ನಮ್ಮ ಹುದ್ದೆಗೆ ಕುಂದು ಬರುವ ಕೆಲಸ ಯಾವತ್ತೂ ಮಾಡಿಲ್ಲ, ಮಾಡೋದೂ ಇಲ್ಲ. ನನಗಿದು ಮನಸ್ಸಿಗೆ ಬಹಳ ನೋವು ತಂದಿದೆ ಎಂದರು.
ಇದನ್ನೂ ಓದಿ: Crime News: ದೆಹಲಿಯಲ್ಲಿ ನಕಲಿ ನೋಟುಗಳನ್ನು ಪೂರೈಕೆ ಮಾಡುತ್ತಿದ್ದ ಗುಂಪು ಕ್ರೈಂ ಬ್ರಾಂಚ್ ವಶಕ್ಕೆ
ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ
ಚಿತ್ರದುರ್ಗ: ಲಂಚಕ್ಕೆ ಕೈವೊಡ್ಡಿದ ರೆವಿನ್ಯೂ ಇನ್ಸ್‌ಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜಮೀನು ಖಾತೆ ಬದಲಾವಣೆ ಸಂಬಂಧ ಅಳವುದರ ಗ್ರಾಮದ ವಿರೇಶ್ ಬಳಿ ರೆವಿನ್ಯೂ ಇನ್ಸ್‌ಪೆಕ್ಟರ್ ಸಂತೋಷ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ, ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ 4,500 ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸಂತೋಷ್ರನ್ನು ಬಂಧಿಸಿದ್ದಾರೆ. ಎಸಿಬಿ ಎಸ್ಐ ಉಮೇಶ ಕುಮಾರ್, ಪ್ರಭು ಸೂರಿನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Tue, 24 May 22