ದೊಡ್ಡ ಸೆಲಿಬ್ರಿಟಿ ಆಗಬೇಕೆಂದುಕೊಂಡಿದ್ದ ನಟಿ ಎಲಿಜಬೆತ್ ಶಾರ್ಟ್​​ಳನ್ನು 1947ರಲ್ಲಿ ಭೀಕರವಾಗಿ ಕೊಂದವನು 75 ವರ್ಷ ಕಳೆದರೂ ಸಿಕ್ಕಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 08, 2022 | 8:04 AM

ಜನೆವರಿ 15,1947 ರಂದು ಲಾಸ್ ಏಂಜಲೀಸ್ ನಗರದ ಹೊರವಲಯದಲ್ಲಿ ತನ್ನ ಮೂರು-ವರ್ಷದ ಮಗಳೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬಳು ತನ್ನ ಮುಂದೆ ಹುಲ್ಲಿನ ಪೊದೆಯೊಂದರಲ್ಲಿ ಬಿದ್ದಿದ ಮಹಿಳೆಯೊಬ್ಬಳ ಅರ್ಧಭಾಗದಷ್ಟು ದೇಹವನ್ನು ಕಂಡು ಕಿಟಾರನೆ ಕಿರುಚಿದಳು.

ದೊಡ್ಡ ಸೆಲಿಬ್ರಿಟಿ ಆಗಬೇಕೆಂದುಕೊಂಡಿದ್ದ ನಟಿ ಎಲಿಜಬೆತ್ ಶಾರ್ಟ್​​ಳನ್ನು 1947ರಲ್ಲಿ ಭೀಕರವಾಗಿ ಕೊಂದವನು 75 ವರ್ಷ ಕಳೆದರೂ ಸಿಕ್ಕಿಲ್ಲ!
ಎಲಿಜಬೆತ್ ಶಾರ್ಟ್
Follow us on

ಸೆಲಿಬ್ರಿಟಿ ನಟಿಯಾಗಬೇಕು, ಜನಪ್ರಿಯತೆಯ (popularity) ಉತ್ತುಂಗಕ್ಕೇರಬೇಕು, ಕೈ ತುಂಬಾ ಹಣ ಸಂಪಾದನೆ ಮಾಡಬೇಕು ಅಂತ ಕನಸು ಕಾಣುತ್ತಾ ಮಹತ್ವಾಕಾಂಕ್ಷೆಯ ಉದಯೋನ್ಮುಖ ನಟಿಯಾಗಿದ್ದ ಎಲಿಜಬೇತ್ ಶಾರ್ಟ್ (Elizabeth Short) ಅಮೇರಿಕದ ಜನರಿಗೆ ‘ದಿ ಬ್ಲ್ಯಾಕ್ ದಹ್ಲಿಯ’ (The Black Dahlia) ಅಂತಲೇ ಹೆಚ್ಚು ಪರಿಚಿತಳು. ಅದನ್ನೆಲ್ಲ ಹೇಗೆ ಸಂಪಾದಿಸಬೇಕು ಅಂತ ಅವಳಿಗೆ ಗೊತ್ತಿರಲಿಲ್ಲ, ಅದರೆ ಮೈಯಲ್ಲಿ ನಡುಕ ಹುಟ್ಟಿಸುವ ಅಕೆಯ ಹತ್ಯೆಯನ್ನು ಮರೆಯಲಿ ಅಮೆರಿಕದ ಜನರಿಗೆ ದಶಕಗಳೂ ಸಾಕಾಗಿಲ್ಲ.

ಜನೆವರಿ 15,1947 ರಂದು ಲಾಸ್ ಏಂಜಲೀಸ್ ನಗರದ ಹೊರವಲಯದಲ್ಲಿ ತನ್ನ ಮೂರು-ವರ್ಷದ ಮಗಳೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬಳು ತನ್ನ ಮುಂದೆ ಹುಲ್ಲಿನ ಪೊದೆಯೊಂದರಲ್ಲಿ ಬಿದ್ದಿದ ಮಹಿಳೆಯೊಬ್ಬಳ ಅರ್ಧಭಾಗದಷ್ಟು ದೇಹವನ್ನು ಕಂಡು ಕಿಟಾರನೆ ಕಿರುಚಿದಳು. ಆಗ ಕೇವಲ 22-ವರ್ಷ-ವಯಸ್ಸಿನ ಎಲಿಜಬೆತ್ ಶಾರ್ಟ್ ಸರಿಯಾಗಿ ಅರ್ಧಕ್ಕೆ ಕತ್ತರಿಸಿದ ಮತ್ತು ರುಂಡದ ಭಾಗವನ್ನು ಆ ಮಹಿಳೆ ಕಂಡಿದ್ದಳು. ಎಂಟೆದೆಯವರ ಬೆನ್ನಹುರಿಯಲ್ಲೂ ನಡುಕ ಹುಟ್ಟಿಸುವ ದೃಶ್ಯವದು.

ಎಲಿಜಬೆತ್ ದೇಹದ ಉಳಿದರ್ಧ ಭಾಗ ಕೇವಲ ಒಂದು ಅಡಿಯಷ್ಟು ದೂರದಲ್ಲಿ ಬಿದ್ದಿತ್ತು, ಅವಳ ಹೊಟ್ಟೆಯನ್ನು ಬಗೆದು ಕರಳುಗಳನ್ನು ಹೊರಗೆಳೆದು ಪುನಃ ಹೊಟ್ಟೆಯಲ್ಲಿ ತುರುಕುವ ಪ್ರಯತ್ನ ಮಾಡಲಾಗಿತ್ತು. ಅವಳ ಮುಂಗೈ ಮೇಲೆ ಹಗ್ಗ ಬಿಗಿದ ಗುರುತುಗಳು ಕಾಣಿಸುತ್ತಿದ್ದವು. ದೇಹದ ಕೆಲಭಾಗಗಳಲ್ಲಿ ಚರ್ಮವನ್ನು ಕಿತ್ತು ಹಾಕಲಾಗಿತ್ತು ಮತ್ತು ಅವಳ ದೇಹದ ಎರಡೂ ಭಾಗಗಳು ರಕ್ತದಲ್ಲಿ ನೆನೆದಂತಿದ್ದವು.
ಅವಳ ಮುಖದ ಭಾಗ ಇನ್ನೂ ಭೀಕರವಾಗಿ ವಿರೂಪಗೊಳಿಸಲಾಗಿತ್ತು. ಹಂತಕ ಅವಳ ಎರಡು ತುಟಿಗಳನ್ನು ಕಿವಿಯ ಭಾಗದವರೆಗೆ ಹರಿದಿದ್ದ. ಮುಖದಲ್ಲಿ ಜೋಕರ್ ಗಳ ಮುಗಳ್ನಗು ಕಾಣುವಂತೆ ಅವನು ಮಾಡಿದ್ದ.

ಒಂದು ವಾರದ ನಂತರ ಲಾಸ್ ಏಂಜಲಿಸ್ ಎಕ್ಸಾಮಿನರ್ ಪತ್ರಿಕೆಯ ಸಂಪಾದಕನಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಎಲಿಜಬೆತ್ ಳ ಹಂತಕ ಅಂತ ಪರಿಚಯಿಸಿಕೊಂಡು ಅವಳ ಒಂದಷ್ಟು ವಸ್ತುಗಳನ್ನು ತಾನು ಸ್ಮರಣಾರ್ಥವಾಗಿ ಇಟ್ಟುಕೊಂಡಿದ್ದು ಅಂಚೆಯ ಮೂಲಕ ಅವುಗಳನ್ನು ಪತ್ರಿಕೆಯ ಕಚೇರಿಗೆ ಕಳಿಸುವುದಾಗಿ ಹೇಳಿದ್ದ!

ಕೊಲೆಗಾರ ತಾನು ನೀಡಿದ ಆಶ್ವಾಸನೆಯನ್ನು ಉಳಿಸಿಕೊಂಡಿದ್ದ. ನಾಲ್ಕು ದಿನಗಳ ನಂತರ ಒಬ್ಬ ಪೋಸ್ಟ್ ಮ್ಯಾನ್ ಪತ್ರಿಕೆಯ ವಿಳಾಸವಿದ್ದ ಲಕೋಟೆಯನ್ನು ಕಚೇರಿಗೆ ತಂದುಕೊಟ್ಟ. ಲಕೋಟೆಯಲ್ಲಿ ಎಲಿಜಬೆತ್ ಲ ಜನನ ಪ್ರಮಾಣ ಪತ್ರ, ಪೋಟೋಗಳು, ಕಾಂಟ್ಯಾಕ್ಟ್ ನಂಬರ್ ಗಳ ಬುಕ್, ಬ್ಯುಸಿನೆಸ್ ಕಾರ್ಡ್ಗಳಿದ್ದವು.

ಆದರೆ, ಹಿಂದೆ ನಡೆದ ಅದೆಷ್ಟೋ ಕೊಲೆ ಪ್ರಕರಣಗಳಲ್ಲಾದಂತೆ, ಎಲಿಜಬೆತ್ ಳ ಭಯಾನಕ ಕೊಲೆ ಪ್ರಕರಣದಲ್ಲೂ ಮಾಧ್ಯಮಗಳು ನಡೆಸಿದ ಸರ್ಕಸ್ ಪೊಲೀಸರನ್ನು, ತನಿಖಾಧಿಕಾರಿಗಳನ್ನು ಗೊಂದಲಕ್ಕೆ ದೂಡುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಪೊಲೀಸರಿಗೆ ಸಾಕಾಗುವಷ್ಟು ಸುಳಿವುಗಳು ಸಿಕ್ಕವು ಆದರೆ ಸತ್ಯ ಮತ್ತು ಸುಳ್ಳುಗಳನ್ನು ಬೇರ್ಪಡಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಬಲವಾದ ಶಂಕಿತರೆನಿಸಿಕೊಂಡಿದ್ದ 12 ಜನರನ್ನು ಪೊಲೀಸರು ಹಗಲು ರಾತ್ರಿ ವಿಚಾರಣೆ ನಡೆಸಿದರು. ಅವಳನ್ನು ಕೊಂದಿದ್ದು ತಾನೇ ಅಂತ ಹೇಳಿಕೊಂಡು 60 ಜನ ಮುಂದೆ ಬಂದಿದ್ದರು.

ಆದರೆ ಎಲಿಜಬೆತ್ ಶಾರ್ಟ್ ಕೊಲೆ ಪ್ರಕರಣದಲ್ಲಿ ಒಬ್ಬೇ ಒಬ್ಬನನ್ನು ಅರೆಸ್ಟ್ ಮಾಡುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಅವಳನ್ನು ಅಷ್ಟು ಭಯಾನಕವಾಗಿ ಕೊಂದಿದ್ದು ಯಾರು ಅನ್ನೋದು ಇವತ್ತಿಗೂ ನಿಗೂಢ!!