ಅತ್ಯಾಚಾರಕ್ಕೊಳಗಾಗಿ ಏಳು-ತಿಂಗಳು ಗರ್ಭಣಿಯಾಗಿದ್ದ 17-ವರ್ಷದ ಅಪ್ರಾಪ್ತೆಯೊಬ್ಬಳು ಮನೆತನದ ಮಾನ ಉಳಿಸಲು ಅತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಶನಿವಾರ ನಡೆದಿದೆ. ಅಪ್ರಾಪ್ತೆಯ ದೇಹ ಆಕೆಯ ಮನೆಯಲ್ಲಿ ನೇತಾಡುತಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ಪಕ್ಷಗಳು (ಶಿವ ಸೇನೆ, ಎನ್ ಸಿ ಪಿ ಮತ್ತು ಕಾಂಗ್ರೆಸ್) ಸೇರಿ ಆಡಳಿತ ನಡೆಸುತ್ತಿರುವ ಮಹಾರಾಷ್ಟ್ರದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ, ಮಹಿಳೆಯ ಮೇಲೆ ಅತ್ಯಾಚಾರ ನಡೆದು ಸಂತ್ರಸ್ತೆ ಸತ್ತಿರುವ ಎರಡನೇ ಪ್ರಕರಣ ಇದಾಗಿದೆ.
ಸೆಪ್ಟೆಂಬರ್ 9 ರಂದು ದೆಹಲಿಯ ನಿರ್ಭಯಾದಂಥ ಅತಿ ಘೋರ ಮತ್ತು ಅಷ್ಟೇ ಭಯಾನಕ ಘಟನೆ ಮುಂಬೈ ನಗರ ಸಾಕಿ ನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ನಡೆದಿದೆ. 30 ವರ್ಷ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗದ ಜೊತೆಗೆ ದೇಹದ ಮೇಲೆಲ್ಲ ಬೀಕರ ಗಾಯಗಳನ್ನು ಮಾಡಿ, ಅಕೆಯನ್ನು ರಕ್ತಸಿಕ್ತ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಸಾಡಿ ಹೋಗಲಾಗಿತ್ತು. ಮುಂಬೈ ನಗರದ ಆಸ್ಪತ್ರೆಯೊಂದಕ್ಕೆ ಆಕೆಯನ್ನು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲ ನೀಡದೆ ಮರಣವನ್ನಪ್ಪಿದ್ದಾರೆ. ಮುಂಬೈ ಮಹಾನಗರ ಮಹಿಳೆಯರಿಗೆ ಸುರಕ್ಷಿತ ಅಂತ ಹೇಳಲಾಗುತ್ತಿತ್ತು. ಆದರೆ ತೀವ್ರ ಸ್ವರೂಪದ ಬದಲಾವಣೆ ನಗರದಲ್ಲಿ ಆಗಿರುವಂತಿದೆ.
ಗುರುವಾರದಂದು ಪುಣೆಯಲ್ಲಿ 14-ವರ್ಷದ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಅಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪದಲ್ಲಿ ಲಾಡ್ಜೊಂದರ ಇಬ್ಬರು ಮ್ಯಾನೇಜರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 14 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರಿ ಪ್ರಕರಣದ ಹಿನ್ನೆಲೆ ಹೀಗಿದೆ: ಆಗಸ್ಟ್ 31 ರಂದು ಈ 14 ವರ್ಷದ ಬಾಲಕಿಯು ತನ್ನೊಬ್ಬ ಗೆಳತಿಯನ್ನು ಭೇಟಿಯಾಗಲು ಮನೆಯಿಂದ ಹೊರಟು ರೈಲು ನಿಲ್ದಾಣಕ್ಕೆ ಬಂದು ಟ್ರೇನ್ ಗಾಗಿ ಕಾಯುತ್ತಿದ್ದಾಗ, ಆಕೆಯಿದ್ದಲ್ಲಿಗೆ ಬಂದ ಅಟೋ ಡ್ರೈವರ್ನೊಬ್ಬ ಎಲ್ಲ ಟ್ರೇನ್ಗಳು ಹೋಗಿಯಾಗಿದೆ, ಮುಂದಿನ ಟ್ರೇನ್ ಮರುದಿನ ಬೆಳಗ್ಗೆಯೇ ಇರೋದು ಅಂತ ಹೇಳುತ್ತಾನೆ. ಬಾಲಕಿ ಗಾಬರಿಯಾದಾಗ ಆವನು ರಾತ್ರಿ ಕಳೆಯಲು ಸುತಕ್ಷಿತ ಸ್ಥಳದ ವ್ಯವಸ್ಥೆ ಮಾಡುವುದಾಗಿ ಹೇಳಿ ಅಕೆಯನ್ನು ಆಟೋನಲ್ಲಿ ಕೂರಿಸಿಕೊಂಡು ರೇಲ್ವೆ ನಿಲ್ದಾಣದಿಂದ ಹೊರಡುತ್ತಾನೆ. ಹೆದರಿಕೊಂಡಿದ್ದ ಬಾಲಕಿ ಆ ಪಾಪಿಯನ್ನು ನಂಬಿ ಬಿಡುತ್ತಾಳೆ. ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯದೆ ಒಂದು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗುತ್ತಾನೆ.
ನಂತರ ತನ್ನ ಹಲವು ಸ್ನೇಹಿತರನ್ನು-ಅವರಲ್ಲಿ ಇಬ್ಬರು ಅವನಂತೆ ಆಟೋ ಡ್ರೈವರ್ಗಳು ಅಲ್ಲ್ಲಿಗೆ ಕರೆಸಿ ಬಾಲಕಿಯನ್ನು ದುಷ್ಟ ಮತ್ತು ಮಾನವೀಯತೆಯೇ ಇಲ್ಲ್ಲದ ಪಶುಗಳ ಕಾಮತೃಷೆಗೆ ಈಡುಮಾಡುತ್ತಾನೆ. ಈ ನರರಾಕ್ಷಸ ಪಾಪಿಗಳಲ್ಲಿ ಇಬ್ಬರು ರೇಲ್ವೇಸ್ ನಾಲ್ಕನೇ ದರ್ಜೆ ನೌಕರರೂ ಸೇರಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪಾಪದ ಹುಡುಗಿಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಹಲವಾರು ಬಾರಿ ಅತ್ಯಾಚಾರವೆಸಗಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾಡಿದ ಪುಣೆ ಪೊಲೀಸ್ ಕಮೀಷನರ್ ಅಮಿತಾಬ್ ಗುಪ್ತಾ ಅವರು, ‘ಈ ಕೇಸಿನಲ್ಲಿ ಒಬ್ಬ ಪಬ್ಲಿಕ್ ಪ್ರಾಸಿಕ್ಯೂಟರ್ ನಿಯುಕ್ತಿ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ, ಇದು ಪೋಕ್ಸೋ ಕಾಯಿದೆ ಅಡಿಯಲ್ಲಿ ಬರುವ ಪ್ರಕರಣವಾಗಿರುವುದರಿಂದ ವಿಚಾರಣೆಯನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ನಲ್ಲಿ ನಡೆಸುವ ಅವಕಾಶವಿದೆ. ಸಂತ್ರಸ್ತೆಯ ತಂದೆ ತಾಯಿಗಳು ಮಗು ಕಾಣೆಯಾಗಿರುವ ದೂರು ದಾಖಲಿಸಿದ ನಂತರ ಆಕೆ ಚಂಡೀಗಡ್ನಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ವಾಪಸ್ಸು ಕರೆತಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ‘ಪುಣೆಗೆ ವಾಪಸ್ಸು ಕರೆತರುವಾಗ ಬಾಲಕಿ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಅಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು,’ ಎಂದು ಗುಪ್ತಾ ಹೇಳಿದರು.
‘ಸದರಿ ಪ್ರಕರಣದಲ್ಲಿ 14 ಜನರನ್ನು ಬಂಧಿಸಲಾಗಿದೆ, ರೈಲು ನಿಲ್ದಾಣದಲ್ಲಿನ ಸಿಸಿಟಿವಿ ಒದಗಿಸಿದ ಫುಟೇಜ್ ಆಧಾರದಲ್ಲಿ ಮೊದಲಿಗೆ ಅಟೋ ಡ್ರೈವರ್ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವನ ಬಾಯಿಬಿಟ್ಟಂತೆಲ್ಲ ಒಬ್ಬೊಬ್ಬರಾಗಿ ಇದುವರೆಗೆ 14 ಆರೋಪಗಳನ್ನು ಬಂಧಿಸಿದ್ದೇವೆ,’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಬದುಕುಳಿಯಲಿಲ್ಲ ಮುಂಬೈ ಅತ್ಯಾಚಾರ ಸಂತ್ರಸ್ತೆ; 33 ತಾಸುಗಳ ಜೀವನ್ಮರಣ ಹೋರಾಟ ಅಂತ್ಯ