ಚಿತ್ರದುರ್ಗ: ಸ್ನೇಹಿತನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಪ್ರಯತ್ನ; ಆರೋಪಿಗಳು ಸಿಕ್ಕಿಬಿದ್ದಿದ್ದೆ ರೋಚಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 09, 2023 | 7:03 PM

ಚಾಮರಾಜ ನಗರ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ವಾಸವಾಗಿದ್ದನು. ಯಾದಗಿರಿ ಮೂಲದವರ ಜತೆಗೆ ಫ್ರೆಂಡ್ ಶಿಪ್ ಮಾಡಿಕೊಂಡಿದ್ದನು. ಆದ್ರೆ, ಆರು ತಿಂಗಳಲ್ಲೇ ಸ್ನೇಹ ಮುರಿದು ಬಿದ್ದಿದ್ದು, ದ್ವೇಷ ಮೂಡಿದೆ. ಪರಿಣಾಮ ಚಾಮರಾಜನಗರದ ವ್ಯಕ್ತಿ ಬೀದಿ ಹೆಣವಾಗಿ ಪತ್ತೆ ಆಗಿದ್ದು ಮಾತ್ರ ಮದ್ಯ ಕರ್ನಾಟಕದ ಕೋಟೆನಾಡಿನಲ್ಲಿ. ಹಾಗಾದ್ರೆ, ಅಸಲಿಗೆ ಆಗಿದ್ದೇನು. ಈ ಕುರಿತು ವರದಿ ಇಲ್ಲಿದೆ.

ಚಿತ್ರದುರ್ಗ: ಸ್ನೇಹಿತನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಪ್ರಯತ್ನ; ಆರೋಪಿಗಳು ಸಿಕ್ಕಿಬಿದ್ದಿದ್ದೆ ರೋಚಕ
ಚಿತ್ರದುರ್ಗ
Follow us on

ಚಿತ್ರದುರ್ಗ, ಸೆ.09: ಜುಲೈ 22ರಂದು ಕೋಟೆನಾಡಿನ ರಾಷ್ಟ್ರೀಯ ಹೆದ್ದಾರಿ ಬದಿ ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಐಮಂಗಲ ಠಾಣೆ ಸಿಪಿಐ ಕಾಂತರಾಜ ಅಂಡ್ ಟೀಮ್. ಇದೀಗ ಮರ್ಡರ್ ಮಿಸ್ಟರಿಯನ್ನು ಭೇಧಿಸಿದೆ. ಹೌದು, ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಚನ್ನಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ) ಬದಿಯಲ್ಲಿ ಜುಲೈ 22ರಂದು ಅನಾಮಧೇಯ ಶವ ಪತ್ತೆ ಆಗಿತ್ತು. ಮೇಲ್ನೋಟಕ್ಕೆ ಹಿಟ್ ಅಂಡ್ ರನ್ ಎಂಬಂತೆ ಕಾಣುತ್ತಿತ್ತಾದರೂ ಖಾಕಿ ಪಡೆಗೆ ಇದು ಪಕ್ಕಾ ಮರ್ಡರ್ ಎಂಬ ಸುಳಿವು ಸಿಕ್ಕಿತ್ತು. ಐಮಂಗಲ ಠಾಣೆಯ ಸಿಪಿಐ ಕಾಂತರಾಜ್ ಅಂಡ್ ಟೀಮ್ ತನಿಖೆ ನಡೆಸಿದಾಗ ಪೊಲೀಸರ ಶಂಕೆ ಪಕ್ಕಾ ಆಗಿತ್ತು.

ತನಿಖೆ ಆರಂಭಿಸಿದ ಪೊಲೀಸರಿಗೆ ಮೃತನ ಜೇಬಿನಲ್ಲಿ ಐಡಿ ಕಾರ್ಡ್ ಸಿಕ್ಕಿದ್ದು, ಮೃತನ ಸಂಬಂಧಿಕರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ. ಚಾಮರಾಜನಗರದ ಹನೂರು ಮೂಲದ ನಾಗೇಂದ್ರ(40) ಕೊಲೆಯಾಗಿದ್ದನೆಂಬುದು ತಿಳಿಯುತ್ತದೆ. ಬೆಂಗಳೂರಿನ ಕಲ್ಲಿಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಯಾದಗಿರಿ ಮೂಲದ ಕಾರ್ಮಿಕ ರಾಜು ಜತೆಗೆ ಆರು ತಿಂಗಳ ಹಿಂದೆ ಗೆಳೆತನ ಮಾಡಿದ್ದನು. ಆದ್ರೆ, ಗೆಳೆಯ ಎಂಬುದನ್ನು ಮರೆತು ರಾಜುನ ಪತ್ನಿ ಮೇಲೆ ಕಣ್ಣು ಹಾಕಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು.

ಇದನ್ನೂ ಓದಿ:ತನ್ನ ಮಗಳನ್ನು ಪ್ರೀತಿಸುತ್ತಿದ್ದ ಬಾಲಕನನ್ನು ಹೊಡೆದು ಕೊಲೆ ಮಾಡಿದ ತಂದೆ ಅರೆಸ್ಟ್

ಇನ್ನು ಈ ವಿಷಯ ತಿಳಿದು ಕೆಂಡವಾದ ರಾಜು ಸ್ನೇಹಿತರಾದ ಮಾಳಿಂಗರಾಯ, ಶರಣು ಜತೆಗೆ ಸೇರಿ ನಾಗೇಂದ್ರನ ಹತ್ಯೆಗೆ ಸ್ಕೆಚ್ ಹಾಕಿದ್ದನು. ರಾಜು ಮತ್ತು ನಾಗೇಂದ್ರ ಮದ್ಯೆ ಹಣದ ವ್ಯವಹಾರ ಇತ್ತು. ಹೀಗಾಗಿ, ಕೈಸಾಲ ಪಡೆದಿದ್ದ ಐವತ್ತು ಸಾವಿರ ರೂಪಾಯಿ ವಾಪಸ್ ಕೊಡುವಂತೆ ಹೇಳಿ ನಾಗೇಂದ್ರನನ್ನು ಕರೆಸಿಕೊಳ್ಳುತ್ತಾರೆ. ಬಳಿಕ ನಾಗೇಂದ್ರ ತಲೆಗೆ ಕೋಲಿನಿಂದ ಹೊಡೆದು ಹತ್ಯೆ ಮಾಡುತ್ತಾರೆ. ಬಳಿಕ ವಾಹನವೊಂದರಲ್ಲಿ ನಾಗೇಂದ್ರನ ಶವ ತಂದು ಮದ್ಯರಾತ್ರಿ ವೇಳೆ ಚನ್ನಮ್ಮನಹಳ್ಳಿ ಬಳಿ ಹೆದ್ದಾರಿ ಬದಿ ಎಸೆದು ಎಸ್ಕೇಪ್ ಆಗಿರುತ್ತಾರೆ. ಅಪಘಾತವೆಂದು ಬಿಂಬಿಸಿ ಕೇಸ್ ಮುಚ್ಚಿ ಹಾಕುವುದು ಆರೋಪಿಗಳ ಪ್ಲಾನ್ ಆಗಿರುತ್ತದೆ. ಆದ್ರೆ, ಪೊಲೀಸ್ರು ಈಗ ಆರೋಪಿಗಳಾದ ರಾಜು, ಮಾಳಿಂಗರಾಯ ಮತ್ತು ಶರಣು ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.

ಇನ್ನು ರಾಷ್ಟ್ರೀಯ ಹೆದ್ದಾರಿ 150(ಎ) ಆಸುಪಾಸಿನ ಹಳ್ಳಿಗಳ ಜನರು ಅಸಲಿಗೆ ಈ ಪ್ರಕರಣವನ್ನು ಅಪಘಾತವೆಂದೇ ಭಾವಿಸಿದ್ದರು. ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇರುತ್ತವೆ. ಹೀಗಾಗಿ, ಈ ಭಾಗದ ಹೆದ್ದಾರಿ ಆಕ್ಸಿಡೆಂಟ್ ಝೋನ್ ಎಂಬ ಭೀತಿ ಸಹಜವಾಗಿ ಜನರಲ್ಲಿತ್ತು. ಇದೀಗ ಅಪಘಾತ ಅಲ್ಲ, ಹತ್ಯೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದ ಬಳಿಕ ಆಕ್ಸಿಡೆಂಟ್ ಝೋನ್ ಈಗ ಕ್ರೈಂ ಝೋನ್ ಆಗುತ್ತಿದೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ.

ಇದನ್ನೂ ಓದಿ:ಮನೆಗೆ ಕರೆ ಮಾಡಲು ಫೋನ್​​ ನೀಡದ ಸಹೋದ್ಯೋಗಿಯ ಕೊಲೆ ಮಾಡಿದ ಒಡಿಶಾದ ಮೂವರು ಕಾರ್ಮಿಕರ ಬಂಧನ

ಒಟ್ಟಾರೆಯಾಗಿ ಚನ್ನಮ್ಮನಹಳ್ಳಿ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ನಲವತ್ತು ದಿನದ ಬಳಿಕ ಪೊಲೀಸ್ರು ಬೇಧಿಸಿದ್ದಾರೆ. ಅಕ್ರಮ ಸಂಬಂಧ ಮತ್ತು ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಪ್ರಕರಣ ನಡೆದಿದ್ದು ಬಯಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿದ ಐಮಂಗಲ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ. ಹತ್ಯೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸ್ರು ನೀವು ಚಾಪೆ ಕೆಳಗೆ ತೂರಿದ್ರೆ ನಾವು ರಂಗೋಲಿ ಕೆಳಗೇ ತೂರುತ್ತೇವೆ ಎಂಬುದನ್ನು ತೋರಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:38 pm, Sat, 9 September 23