ಮಥುರಾ: ಅಕ್ರಮ ಸಂಬಂಧದ ಬಗ್ಗೆ ನಡೆದ ಗಲಾಟೆಯ ಬಳಿಕ ಉತ್ತರ ಪ್ರದೇಶದ (Uttar Pradesh) ಮಥುರಾ ಜಿಲ್ಲೆಯಲ್ಲಿ ಹೆಂಡತಿಯೇ ಗಂಡನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಈ ಘಟನೆಯಲ್ಲಿ ಚಿಕಿತ್ಸೆ ವೇಳೆ ಆರೋಪಿಯ ಗಂಡ ನವದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಗೆ ಶೇ. 80ರಷ್ಟು ಸುಟ್ಟ ಗಾಯಗಳಾಗಿದ್ದು, ಅವರು ಮಂಗಳವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೋಮವಾರ ಸಂಜೆ ಕೋಸಿಕಲನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ರೇಖಾ ಎಂಬ ಮಹಿಳೆಗೆ ವಿವಾಹೇತರ ಸಂಬಂಧವಿತ್ತು. ಆಕೆಯ ಪತಿ ಚಮನ್ ಪ್ರಕಾಶ್ ಅದನ್ನು ವಿರೋಧಿಸಿದ್ದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು.
ಇದನ್ನೂ ಓದಿ: Breaking ಮಧ್ಯಪ್ರದೇಶದ ಜಬಲಪುರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 8 ಮಂದಿ ಸಜೀವ ದಹನ
ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಸೋಮವಾರ ಸಂಜೆ ಚಮನ್ ಗಾಢ ನಿದ್ದೆಯಲ್ಲಿದ್ದಾಗ ರೇಖಾ ತನ್ನ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ನಿದ್ರೆಯಿಂದ ಎದ್ದ ಚಮನ್ ಪ್ರಕಾಶ್ನ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದು ಬೆಂಕಿ ನಂದಿಸಿ, ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಅವರು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೋಸಿಕಲನ್ ಪೊಲೀಸ್ ಠಾಣೆ ಪ್ರಭಾರಿ ಅನುಜ್ ಕುಮಾರ್, ಮೃತ ಚಮನ್ ಪ್ರಕಾಶ್ ಕುಟುಂಬದಿಂದ ದೂರು ಬಂದಿದೆ. ಆ ದೂರಿನ ಹಿನ್ನೆಲೆಯಲ್ಲಿ ರೇಖಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ.