ವಿಜಯನಗರ: ಜಿಲ್ಲೆಯಲ್ಲಿ ಆಯಿಲ್ ಮಾಫಿಯಾ ಜೋರಾಗಿ ನಡೆಯುತ್ತಿದ್ದು, ಕೈಗಾರಿಕೆಕೋದ್ಯಮಿಗಳು, ಪ್ಯಾಕ್ಟರಿ ಮಾಲೀಕರು, ಉದ್ಯಮಿಗಳು ಆಯಿಲ್ ಬ್ಯಾರೆಲ್ಗಳನ್ನು ಸಂಗ್ರಹಿಸಿಡುವುದು ಹೇಗಪ್ಪಾ ಎಂದು ಚಿಂತೆಯಲ್ಲಿದ್ದಾರೆ. ಹೊಸಪೇಟೆ ಪಟ್ಟಣದ ಸುತ್ತಮುತ್ತಲಿನ ಕೈಗಾರಿಕೆ ಪ್ಯಾಕ್ಟರಿ ಗೋಡೌನ್ಗಳಲ್ಲಿಟ್ಟ ಆಯಿಲ್ ಬ್ಯಾರೆಲ್ಗಳು ಸದ್ದಿಲ್ಲದೇ ಕಳ್ಳತನವಾಗುತ್ತಿವೆ. ಕಳ್ಳರು ಆಯಿಲ್ ಬ್ಯಾರೆಲ್ಗಳನ್ನು ಕಳ್ಳತನ ಮಾಡಿದ ದೃಶ್ಯಗಳು ಸಿಸಿ ಕ್ಯಾಮಾರದಲ್ಲೂ ಸೆರೆಯಾಗಿವೆ. ಹೀಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಯಿಲ್ ಬ್ಯಾರೆಲ್ಗಳು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಜೂನ್ 24ರಂದು ಹೊಸಪೇಟೆ ಪಟ್ಟಣದ ಉದ್ಯಮಿ ರಾಜು ಸಲಾಕೆ ಎನ್ನುವವರ ಗೋಡೌನ್ನಲ್ಲಿದ್ದ 32 ಲಕ್ಷ ಮೌಲ್ಯದ ಟ್ರಾನ್ಸಫಾರ್ಮರ್ಗೆ ತುಂಬುವ 142 ಆಯಿಲ್ ಬ್ಯಾರೆಲ್ಗಳು ಕಳ್ಳತನವಾಗಿತ್ತು. ಈ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆಗೆ ಇಳಿದ ಪೊಲೀಸರು ಮಾಡಿದ್ದೇ ಬೇರೆ. ಅದೇನೆಂದು ಇಲ್ಲಿದೆ ನೋಡಿ
ಆಯಿಲ್ ಬ್ಯಾರೆಲ್ ಕಳ್ಳತನ ಮಾಡಿದ ಪ್ರಕರಣದ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಸಿಸಿ ಕ್ಯಾಮಾರದಲ್ಲಿನ ದೃಶ್ಯಗಳನ್ನು ಆಧರಿಸಿ ಮೂವರು ಕಳ್ಳರನ್ನ ಬಂಧಿಸಲಾಗಿದೆ. ಬಂಧಿತ ಕಳ್ಳರು ರಾಜಧಾನಿ ಬೆಂಗಳೂರಿನಲ್ಲಿಟ್ಟ 70 ತುಂಬಿದ ಆಯಿಲ್ ಬ್ಯಾರೆಲ್ಗಳ ರಿಕವರಿ ಸಹ ಮಾಡಿದ್ದಾರೆ. ಮೂವರು ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡ ಬ್ಯಾರೆಲ್ಗಳನ್ನ ದೂರುದಾರರಿಗೆ ಹಂಚಿಕೆ ಮಾಡುವ ವೇಳೆ ಮಹಾ ಡ್ರಾಮಾ ಮಾಡಿದ್ದಾರೆ.
ಕಳ್ಳರಿಂದ ವಶಪಡಿಸಿಕೊಂಡ ಬ್ಯಾರೆಲ್ಗಳ ಬದಲಾಗಿ ಬಾಡಿಗೆ ಬ್ಯಾರೆಲ್ಗಳ ಪೋಟೋಶೂಟ್ ಮಾಡಿಸಿ. ಖಾಲಿ ಮತ್ತು ನೀರು ತುಂಬಿದ ಬ್ಯಾರೆಲ್ಗಳನ್ನಿಟ್ಟು ಪೋಟೋಶೂಟ್ ಮಾಡಿಸಿದ್ದಾರೆ. ಉದ್ಯಮಿಗೆ ಮನವೊಲಿಸಿ ಬಾಡಿಗೆ ಬ್ಯಾರೆಲ್ಗಳನ್ನ ತರಿಸಿಕೊಂಡಿದ್ದ ಪೊಲೀಸರು 70 ಬಾಡಿಗೆ ಬ್ಯಾರೇಲ್ಗಳ ಮುಂದೆ ಪೋಟೋಶೂಟ್ ಮಾಡಿಸಿದ್ದಾರೆ. ನಂತರ ಕಳ್ಳರಿಂದ ವಶಪಡಿಸಿಕೊಂಡ ಬ್ಯಾರೆಲ್ಗಳ ಬದಲಾಗಿ ಉದ್ಯಮಿ ರಾಜುಗೆ ಕೆಟ್ಟು ಹೋಗಿರುವ ಆಯಿಲ್ ತುಂಬಿದ ಬ್ಯಾರೇಲ್ ಹಸ್ತಾಂತರ ಮಾಡಿ ಇವು ನಿಮ್ಮದೇ ಬ್ಯಾರೆಲ್ಗಳೆಂದು ಒತ್ತಾಯಪೂರ್ವಕವಾಗಿ ಬ್ಯಾರೆಲ್ ಇಳಿಸಿ ಹೋಗಿದ್ದಾರೆ.
ಪೊಲೀಸರ ಮಾಡಿದ ಮೋಸದಿಂದ ಬೆಲೆ ಬಾಳುವ ತುಂಬಿದ ಆಯಿಲ್ ಬ್ಯಾರೆಲ್ಗಳನ್ನ ಕಳೆದುಕೊಂಡಿರುವ ಉದ್ಯಮಿ ರಾಜು ಸಲಾಕೆ ನಮ್ಮ ಬ್ಯಾರೆಲ್ಗಳನ್ನ ನಮಗೆ ಕೊಡಿಸಿ ಅಂತಿದ್ದಾರೆ. ಪೊಲೀಸರ ಮಾಡಿದ ಮೋಸದ ವಿರುದ್ದ ಮರಳಿ ಬ್ಯಾರೆಲ್ಗಳನ್ನ ಹಸ್ತಾಂತರ ಮಾಡಿರುವ ರಾಜು ಸಲಾಕೆ, ತಮಗಾದ ಮೋಸದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡ ಬೆಲೆ ಬಾಳುವ ಆಯಿಲ್ ಬ್ಯಾರಲ್ಗಳ ಬದಲಾಗಿ ಬಾಡಿಗೆ ಬ್ಯಾರಲ್ ಹಾಗೂ ನೀರು ತುಂಬಿದ ಬ್ಯಾರಲ್ ಹಸ್ತಾಂತರ ಮಾಡಿದ ಬಗ್ಗೆ ಉದ್ಯಮಿ ತಕರಾರು ತಗೆದಿದ್ದಾರೆ. ಆದರೆ ಪೊಲೀಸರು ಮಾತ್ರ ತನಿಖೆಯ ಬಗ್ಗೆ ಸಂಶಯ ಇದ್ದರೆ ತನಿಖಾಧಿಕಾರಿಯನ್ನ ಬದಲಿಸಿ ತನಿಖೆ ಮಾಡುವುದಾಗಿ ಹೇಳುತ್ತಿದ್ದಾರೆ. ಜೊತೆಗೆ ಉದ್ಯಮಿಯ ಒತ್ತಡಕ್ಕೆ ಮಣಿದಿರುವ ಪೊಲೀಸರು ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನ ಮರಳಿ ವಶಕ್ಕೆ ಪಡೆದು ಮತ್ಮೊಮ್ಮೆ ವಿಚಾರಣೆ ಮಾಡಲು ಮುಂದಾಗಿದ್ದಾರೆ.
ಪೊಲೀಸರು ಆಯಿಲ್ ಬ್ಯಾರಲ್ ಕಳ್ಳತನ ಪ್ರಕರಣದಲ್ಲಿ ಎನಾದರು ತಪ್ಪು ಮಾಡಿದ್ದಾರಾ ಅನ್ನೋ ಬಗ್ಗೆಯೂ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಆಯಿಲ್ ಮಾಫೀಯಾದ ಜೊತೆ ಕೈ ಜೋಡಿಸಿರುವ ಕಳ್ಳರು ಹಾಗೂ ಕಳ್ಳರಿಗೆ ಸಾಥ್ ನೀಡುತ್ತಿರುವ ಪೊಲೀಸರ ಬಗ್ಗೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ಮಾಡಿದಾಗ ಮಾತ್ರ ಮಾಫಿಯಾದ ನಿಜಬಣ್ಣ ಬಯಲಿಗೆ ಬರಲಿದೆ. ಆ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಟ್ರಾನ್ಸ್ಫರ್ಮರ್ ರಿಪೇರಿ ಮಾಡುವ ಕಾರ್ಖಾನೆ ನಮ್ಮದು. ಈ ಕಾರ್ಖಾನೆಯೊಳಗೆ ಹೆಚ್ಚುವರಿ ಇರುವ ಆಯಿಲ್ಗಳ ಬ್ಯಾರೆಲ್ಗಳನ್ನು ಸಂಗ್ರಹಿಸಿಡಲಾಗಿತ್ತು. ಟ್ರಾನ್ಸ್ಫರ್ಮ್ಗಳಿಗೆ ಹಾಕು 32ಲಕ್ಷ ಮೌಲ್ಯದ 142 ಬ್ಯಾರೆಲ್ ಹೊಸ ಆಯಿಲ್ಗಳು ಕಳ್ಳತನವಾಗಿದ್ದು, ಜೂ.24ರಂದು ಎಫ್ಐಆರ್ ದಾಖಲಿಸಿದ್ದೇವೆ. ಕಳ್ಳತನ ನಡೆದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲವನ್ನೂ ದಾಖಲೆಯಾಗಿ ನೀಡಲಾಗಿದೆ ಎಂದು ಉದ್ಯಮಿ ರಾಜು ಸಲಾಕೆ ಅವರು ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಪ್ರಕರಣ ದಾಖಲಿಸಿದ ನಂತರ ಪೊಲೀಸರು ಮೂವರು ಆರೋಪಿಗಳನ್ನು ಆ.25ರಂದು ಬಂಧಿಸಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ನೋಡಿದಾಗ ಕೃತ್ಯಕ್ಕೆ ಬಳಿಸಿದ ವಾಹನವನ್ನು ಜಪ್ತಿ ಮಾಡಿದ್ದರು. ಆರೋಪಿಗಳ ಬಂಧನದ ನಂತರ ತನಿಖೆ ಆರಂಭಿಸಿದ್ದ ಪೊಲೀಸರು, ಹೊಸಪೇಟೆಯಲ್ಲಿ ಮಾರಾಟ ಮಾಡಿದ ಆಯಿಲ್ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿದುಬಂತು. ಈ ವೇಳೆ ಪೊಲೀಸರು, ಬ್ಯಾರೆಲ್ಗಳು ತುಂಬಾ ಭಾರ ಇವೆ, ಒಂದು ಕಡೆಯಿಂದ ಪಂಚನಾಮೆ ಮಾಡಬೇಕು ಮತ್ತು ಪೊಲೀಸ್ ಠಾಣೆ ಮುಂದೆ ಇಟ್ಟು ಫೋಟೋಶೂಟ್ ಮಾಡಬೇಕು, ಹೀಗಾಗಿ ಖಾಲಿ ಬ್ಯಾರೆಲ್ಗಳನ್ನು ಕೊಡುವಂತೆ ನಮ್ಮ ಬಳಿ ಕೇಳಿದ್ದಾರೆ. 32 ಲಕ್ಷ ಮೌಲ್ಯದ ಬ್ಯಾರೆಲ್ಗಳು ಸಿಕ್ಕಿವೆ ಎಂಬ ಖುಷಿಯಲ್ಲಿ ಖಾಲಿ ಬ್ಯಾರೆಲ್ಗಳನ್ನು ಕಳುಹಿಸಿಕೊಟ್ಟಿದ್ದೆವು. ಖಾಲಿ ಬ್ಯಾರೆಲ್ಗಳ ಮುಂದೆ ನಿಲ್ಲಿಸಿ ಫೋಟೋಶೂಟ್ ಕೂಡ ಮಾಡಿದ್ದಾರೆ ಎಂದರು.
ಫೋಟೋಶೂಟ್ ನಡೆದ ಸಂಜೆ ಕಾರ್ಖಾನೆ ಬಳಿ ಲಾರಿಯೊಂದು ಬಂದಿದ್ದು, ಅದರಲ್ಲಿ ಬ್ಯಾರೆಲ್ಗಳನ್ನು ತರಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಬ್ಯಾರೆಲ್ಗಳು ನಮ್ಮದಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಇನ್ಸ್ಪೆಕ್ಟರ್ಗೆ ಹೇಳಿದಾಗ ನೀವು ಇಳಿಸಿ, ಅದರ ಬಗ್ಗೆ ಆಮೇಲೆ ಮಾಡುತ್ತೇನೆ ಎಂದಾಗ ನಾವು ಇದರಲ್ಲಿರುವುದು ನಮ್ಮ ಆಯಿಲ್ ಅಲ್ಲ, ಇದಲ್ಲಿ ನೀರು ಮತ್ತು ಕೆಟ್ಟ ಆಯಿಲ್ ಇದೆ, ಬ್ಯಾರೆಲ್ ಕೂಡ ನಮ್ಮದಲ್ಲ ಎಂದು ಕಡಾಖಂಡಿತವಾಗಿ ಹೇಳಿದಾಗ ಪೊಲೀಸರು ಬಲವಂತವಾಗಿ ಇಳಿಸಿ ಹೋಗಿದ್ದಾರೆ. ಪೊಲೀಸರ ಈ ನಡೆಯ ವಿರುದ್ಧ ಎಸ್ಪಿಗೆ ನಾನು ದೂರು ನೀಡಿದ್ದೇನೆ. ಬಳಿಕ ಪೊಲೀಸರು ತಂದಿಳಿಸಿದ್ದ 70 ಬ್ಯಾರೆಲ್ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಇವತ್ತಿನವರೆಗೆ ನಮ್ಮ ಬ್ಯಾರೆಲ್ಗಳು ನಮಗೆ ಸಿಕ್ಕಿಲ್ಲ ಎಂದರು.
ಪೊಲೀಸರು ಜಪ್ತಿ ಮಾಡಿದ ಬ್ಯಾರೆಲ್ಗಳು ನಮ್ಮದಲ್ಲ ಎಂದು ದೂರುದಾರ ರಾಜು ಹೇಳಿದ್ದಾರೆ. ಹೀಗಾಗಿ ಬಂಧಿಸಿದ ಆರೋಪಿಗಳನ್ನು ಮತ್ತೆ ತನಿಖೆ ನಡೆಸಲಾಗುವುದು. ಆ ಮೂಲಕ ಕಳ್ಳತನ ಮಾಡಿದ ಆಯಿಲ್ಗಳನ್ನು ಎಲ್ಲಿಗೆ ಮಾರಾಟ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಲಾಗುವುದು ಎಂದು ನಿರ್ಗಮಿತಿ ಎಸ್ಪಿ ಡಾ.ಕೆ.ಅರುಣ್ ಹೇಳಿದ್ದಾರೆ.
ವರದಿ: ವೀರೇಶ್ ದಾನಿ, ಟಿವಿ9 ವಿಜಯನಗರ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ