ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಪಾಸ್ಪೋರ್ಟ್ ಜಪ್ತಿ
ಹಲವು ಆರೋಪಗಳನ್ನು ಎದುರಿಸುತ್ತಿರುವ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಪಾಸ್ಪೋರ್ಟ್ ಬೆಂಗಳೂರು ಪ್ರಾದೇಶಿಕ ಕಚೇರಿ ವಶಪಡಿಸಿಕೊಂಡಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ( Beloor Raghavendra Shetty) ಅವರ ಪಾಸ್ಪೋರ್ಟ್ ಅನ್ನು ಬೆಂಗಳೂರು ಪಾಸ್ಪೋರ್ಟ್(passport) ಪ್ರಾದೇಶಿಕ ಕಚೇರಿ ವಶಪಡಿಸಿಕೊಂಡಿದೆ. ಪಾಸ್ಪೋರ್ಟ್ ಜಪ್ತಿ ಮಾಡಿಕೊಂಡಿರುವ ಬಗ್ಗೆ ಬೆಂಗಳೂರು ಪಾಸ್ಪೋರ್ಟ್ ಪ್ರಾದೇಶಿಕ ಕಚೇರಿ ಅಧಿಕಾರಿ ಕೃಷ್ಣ ಕುಮಾರ್. ಕೆ ಅವರು ಪತ್ರದ ಮೂಲಕ ಐಎಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಗೆ ತಿಳಿಸಿದ್ದಾರೆ.
ರಾಘವೇಂದ್ರ ಶೆಟ್ಟಿ ವಿರುದ್ಧ ಎಫ್ಐಆರ್
ಚೆಕ್ ಬೌನ್ಸ್, ಹಣ ಪಾವತಿ ಮಾಡದೆ ಕಲಾಕೃತಿಗಳನ್ನು ತೆಗೆದುಕೊಂಡು ಹೋಗಿರುವುದು ಸೇರಿದಂತೆ ಹಲವು ಆರೋಪಗಳು ಬೇಳೂರು ರಾಘವೇಂದ್ರ ಶೆಟ್ಟಿ ಮೇಲಿವೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ಅವರು ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ಮಾಡಿದ್ದರು.
ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಐಪಿಸಿ 175,177,120b,406,407, 420,23 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಘವೇಂದ್ರ ಶೆಟ್ಟಿಯವರ ಡಿಐಎನ್ ಸಂಖ್ಯೆ ಅನರ್ಹವಾದರೂ ಹುದ್ದೆಯಲ್ಲಿ ಮುಂದುವರಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾರಾಯಣ ಕೆ ನಾಯ್ಕ್ ಅವರು ದೂರು ಸಲ್ಲಿಸಿದ್ದರು. ಬೇಳೂರು ರಾಘವೇಂದ್ರ ಶೆಟ್ಟಿ 2020 ರಲ್ಲಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿದ್ದರು.
ಓರ್ವ ವ್ಯಕ್ತಿಯ ಪಾಸ್ಪೋರ್ಟ್ ಜಪ್ತಿ ಆಗಬೇಕು ಎಂದರೆ ಆ ವ್ಯಕ್ತಿ ಮೇಲಿನ ಗುರುತರ ಆರೋಪ ಸಾಬೀತಾಗಬೇಕು. ರಾಜ್ಯದ ಬೇರೆ ಬೇರೆ ನ್ಯಾಯಾಲಯದಲ್ಲಿ 30 ಕೇಸುಗಳನ್ನು ಶೆಟ್ಟಿ ಅವರು ಎದುರಿಸುತ್ತಿದ್ದಾರೆ. ಎರಡು ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಈ ಕುರಿತು ಕಲೆ ಹಾಕಿದ ವಿವರಗಳನ್ನು ರೂಪಾ ಅವರು ಪಾಸ್ಪೋರ್ಟ್ ಕಚೇರಿಗೆ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ, ಈಗ ಶೆಟ್ಟಿ ಅವರ ಪಾಸ್ಪೋರ್ಟ್ನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ರಾಘವೇಂದ್ರ ಶೆಟ್ಟಿ-ರೂಪಾ ಮೌದ್ಗಿಲ್ ಜಟಾಪಟಿ
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ನಡುವೆ ಹಲವು ದಿನಗಳಿಂದ ಜಟಾಪಟಿ ನಡೆಯುತ್ತಿತ್ತು. ಈ ಹಿಂದೆ ರೂಪಾ ಮೌದ್ಗಿಲ್ ಅವರು ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಆರೋಪ ಮಾಡಿ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದರು. ಇದಾದ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ತಳ್ಳಿ ಹಾಕಿ ರೂಪ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು. ಇದರ ನಡುವೆ ಈಗ ನಿಗಮದ ಎಂಡಿ ರೂಪಾ ಮೌದ್ಗಿಲ್ ಅವರು ರಾಘವೇಂದ್ರ ಶೆಟ್ಟಿ ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ನೊಟೀಸ್ ನೀಡಿದ್ದರು.
“ಮೇಲೆ ಹೇಳಿದ ಮೊತ್ತ ಅಷ್ಟೇ ಅಲ್ಲದೇ, ನೀವು ನಿಗಮದ ಕರಕುಶಲ ಕರ್ಮಿಗಳು ಹಾಗೂ ನೋಂದಾಯಿತ ಮಾರಾಟಗಾರರಿ೦ದ ಕಲಾಕೃತಿಗಳನ್ನು ಪಾವತಿಸದೆ ಪಡೆದುಕೊಂಡಿರುತ್ತೀರಿ ಎಂಬ ಮಾಹಿತಿಯು ಇದ್ದು, ಮೇಲೆ ಹೇಳಿದ ಮಾರಾಟಗಾರರಿಗೆ ಹಣ ಮಾಡದೇ ಇರುವ ವಿಷಯ ನಿಗಮಕ್ಕೆ ನೇರ ಸಂಬಂಧ ಇಲ್ಲದಿದ್ದರೂ, ನಿಗಮದ ಅಧ್ಯಕ್ಷರ ಹುದ್ದೆಗೆ ಹಾಗೂ ನಿಗಮದ ಹೆಸರಿಗೆ ಕಳಂಕ ತರುವಂತಾಗಿದೆ,” ಎಂದು ರೂಪಾ ಆರೋಪಿಸಿದ್ದರು.
Published On - 5:40 pm, Tue, 15 November 22