ವಿಜಯಪುರ, ಮಾ.19: ಜಿಲ್ಲೆಯ ನಿಡಗುಂದಿ(Nidagundi) ತಾಲೂಕಿನ ಗಣಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಓರ್ವ ಮಹಿಳೆ ಮತ್ತು ಪುರಷನನ್ನ ಕೊಲೆ ಮಾಡಲಾಗಿದ್ದು, ಮೃತರನ್ನ ಗ್ರಾಮದ ಸೋಮಲಿಂಗಪ್ಪ ಕುಂಬಾರ ಹಾಗೂ ಪಾರ್ವತಿ ತಳವಾರ ಎಂದು ಗುರುತಿಸಲಾಗಿದೆ. ಇನ್ನು ಸುದ್ದಿ ತಿಳಿದು ನಿಡಗುಂದಿ ಸಿಪಿಐ ಶರಣ ಗೌಡರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೆಲ ಗ್ರಾಮಸ್ಥರು ನೀಡಿದ ಮಾಹಿತಿ ಪ್ರಕಾರ ಮೃತ ಪಾರ್ವತಿ ತಳವಾರ ಹಾಗೂ ಸೋಮಲಿಂಗಪ್ಪ ಪೂಜಾರ ಮಧ್ಯೆ ಕೆಳೆದ ಕೆಲ ವರ್ಷಗಳಿಂದಲೂ ಅಕ್ರಮ ಸಂಬಂಧವಿತ್ತಂತೆ. 13 ವರ್ಷಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಬೋರಮ್ಮ ಜೊತೆಗೆ ಸೋಮಲಿಂಗಪ್ಪ ಮದುವೆಯಾಗಿದ್ದ. ಜೊತೆಗೆ ಇವರಿಗೆ 9 ವರ್ಷದ ಮಗನಿದ್ದಾನೆ. ಇತ ಗಣಿ ಗ್ರಾಮದ ತನ್ನ ಮನೆಯ ಬಳಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ. ಇತ್ತ ಪಾರ್ವತಿಗೆ, ಭೀಮಪ್ಪ ತಳವಾರ ಜೊತೆಗೆ 22 ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳಿದ್ದಾಳೆ. ಇಷ್ಟೆಲ್ಲ ಇದ್ದರೂ ಪಾರ್ವತಿ ಹಾಗೂ ಸೋಮಲಿಂಗಪ್ಪ ಮಧ್ಯೆ ಅಕ್ರಮ ಸಂಬಂಧ ಶುರುವಾಗಿದೆ.
ಇದನ್ನೂ ಓದಿ:ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ
ಒಬ್ಬರ ಮನೆಗೆ ಒಬ್ಬರು ಬಂದು ಹೋಗುವುದನ್ನು ಮಾಡುತ್ತಿದ್ದರಂತೆ. ನಿನ್ನೆ(ಮಾ.18) ಸೋಮಲಿಂಪ್ಪ, ಕಿಡ್ನಿ ಸ್ಟೋನ್ ಹಿನ್ನಲೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಪಾರ್ವತಿಯನ್ನು ಕರೆದುಕೊಂಡು ಹೋಗಿದ್ದನಂತೆ. ಆದರೆ, ಸಾಯಂಕಾಲ ಮನೆಗೆ ವಾಪಸ್ ಬಂದಿಲ್ಲ. ಇಂದು(ಮಾ.19) ಬೆಳಿಗ್ಗೆ ಗ್ರಾಮದ ಜನರು ಪಾರ್ವತಿ ಹಾಗೂ ಸೋಮಲಿಂಗಪ್ಪನನ್ನ ಕೊಲೆಯಾದ ಸ್ಥಿತಿಯಲ್ಲಿ ಕಂಡು ಮನೆಯವರಿಗೆ ತಿಳಿಸಿದ್ದಾರೆ. ಆಗಲೇ ಮನೆಯವರಿಗೆ ವಿಚಾರ ಗೊತ್ತಾಗಿದೆಯಂತೆ. ಆದರೆ, ಯಾರು ಕೊಲೆ ಮಾಡಿದರು? ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಪಾರ್ವತಿ ಹಾಗೂ ಸೋಮಲಿಂಗಪ್ಪನ ಮಧ್ಯದ ಅಕ್ರಮ ಸಂಬಂಧವೂ ಗೊತ್ತಿಲ್ಲವಂತೆ. ಜೊತೆಗೆ ಯಾರ ಮೇಲೂ ಸಂಶಯವಿಲ್ಲ ಎಂದು ಕೊಲೆಯಾದ ಸೋಮಲಿಂಗಪ್ಪನ ಪತ್ನಿ ಬೋರಮ್ಮ, ಸಹೋದರಿ ಹಾಗೂ ಸಂಬಂಧಿಕರು ಹೇಳಿದ್ದಾರೆ.
ಇನ್ನು ಇತ್ತ ಮೃತ ಪಾರ್ವತಿ ಕುಟುಂಬದವರು, ‘ನಿನ್ನೆ ಸೋಮಲಿಂಗಪ್ಪ ಹಾಗೂ ಪಾರ್ವತಿ, ಅನತಿ ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಬಂದಿದ್ದೇವೆ. ನಮ್ಮನ್ನು ಕರೆದುಕೊಂಡು ಹೋಗಲು ಬಾ ಎಂದು ಪಾರ್ವತಿ ತನ್ನ ಪುತ್ರ ಲಕ್ಷ್ಮಣನಿಗೆ ಕರೆ ಮಾಡಿದ್ದಾಳೆ. ಇವರನ್ನು ಕರೆಯಲು ಪಾರ್ವತಿಯ ಮಗಾ ಲಕ್ಷ್ಮಣ ತಳವಾರ ಹೋಗಿದ್ದಾನೆ. ಆದರೆ, ತಡರಾತ್ರಿ ಕಳೆದರೂ ಯಾರೂ ಮನೆಗೆ ಬಂದಿಲ್ಲ. ಪಾರ್ವತಿ ಮನೆಯವರು ಆಕೆಗೆ ಕರೆ ಮಾಡಿದರೂ ಸ್ವೀಕಾರ ಮಾಡಿಲ್ಲ. ಲಕ್ಷ್ಮಣನ ಮೊಬೈಲ್ ಕೂಡ ಸಹ ಸ್ವಿಚ್ ಆಫ್ ಆಗಿದೆ. ಆದರೆ, ಬೆಳಿಗ್ಗೆ ಗ್ರಾಮದ ಜನರು ಪಾರ್ವತಿ ಹಾಗೂ ಸೋಮಲಿಂಪ್ಪನ ಶವ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿವೆ ಎಂದಾಗಲೇ ವಿಚಾರ ತಿಳಿದಿದೆ. ಇಬ್ಬರನ್ನು ಕರೆದುಕೊಂಡು ಬರಲು ಹೋದ ಲಕ್ಷ್ಮಣ ಇನ್ನೂ ಮನೆಗೆ ಬಂದಿಲ್ಲ. ಇದು ಬಿಟ್ಟರೆ ನಮಗೆ ಏನೂ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಆನೇಕಲ್: ನಗ್ನ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆ, ಕೊಲೆಗೈದಿರುವ ಶಂಕೆ
ಸದ್ಯ ನಿಡಗುಂದಿ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಿದ್ದಾರೆ. ಮೇಲ್ಮೋಟಕ್ಕೆ ಪಾರ್ವತಿಯ ಮಗಾ ಲಕ್ಷ್ಮಣ ತನ್ನ ತಾಯಿಯ ಹಾಗೂ ಸೋಮಲಿಂಗಪ್ಪನ ಅಕ್ರಮ ಸಂಬಂಧದಿಂದ ರೋಸಿ ಹೋಗಿದ್ದನಂತೆ. ಹೇಗಾದರೂ ಮಾಡಿ ಇಬ್ಬರನ್ನೂ ಮುಗಿಸಿ ಬಿಡಬೇಕೆಂದು ಪ್ಲ್ಯಾನ್ ಮಾಡಿದ್ದನಂತೆ. ಆತನ ಪ್ಲ್ಯಾನ್ ಗೆ ಪೂರಕವಾಗಿ ನಿನ್ನೆ ಇಬ್ಬರನ್ನು ಕರೆದುಕೊಂಡು ಬರುವ ನೆಪದಲ್ಲಿ ಮಚ್ಚು ಹಾಗೂ ಕೊಡಲಿ ತೆಗೆದುಕೊಂಡು ಹೋಗಿದ್ದಾನೆ. ಇಬ್ಬರೂ ರೈಲು ಇಳಿದ ಬಳಿಕ ಊರಿಗೆ ಕರೆ ತರುವಾಗ ಮಾರ್ಗ ಮಧ್ಯೆ ಯಾರೂ ಇಲ್ಲದ್ದನ್ನು ಕಂಡು ಮಚ್ಚು ಹಾಗೂ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರ ತನಿಖೆಯಿಂದಷ್ಟೇ ನಿಖರ ಮಾಹಿತಿ ತಿಳಿದು ಬರಲಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ