AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

74ನೇ ವಯಸ್ಸಿನಲ್ಲಿ ಎಂ.ಎ ಪದವಿ! ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಕೃಷ್ಣ ಕುಮಾರ್ ಗುಪ್ತಾ

ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ; ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಮತ್ತು ಪ್ರಯತ್ನವಿದ್ದರೆ ಸಾಕು ಎಂಬುದನ್ನು 75 ವರ್ಷದ ಕೃಷ್ಣ ಕುಮಾರ್ ಗುಪ್ತಾ ಸಾಬೀತುಪಡಿಸಿದ್ದಾರೆ. ತಮ್ಮ ಈ ವಯಸ್ಸಿನಲ್ಲಿ ಇಗ್ನೋದಿಂದ (IGNOU) ಎಂ.ಎ ಪದವಿ ಪೂರ್ಣಗೊಳಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಬರೆದಿರುವ ಈ ಸಾಧಕನ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

74ನೇ ವಯಸ್ಸಿನಲ್ಲಿ ಎಂ.ಎ ಪದವಿ! ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಕೃಷ್ಣ ಕುಮಾರ್ ಗುಪ್ತಾ
ಕೃಷ್ಣ ಕುಮಾರ್ ಗುಪ್ತಾ
ಅಕ್ಷತಾ ವರ್ಕಾಡಿ
|

Updated on:Oct 01, 2026 | 11:55 AM

Share

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು 75 ವರ್ಷದ ಕೃಷ್ಣ ಕುಮಾರ್ ಗುಪ್ತಾ ಅವರು ಸಾಬೀತುಪಡಿಸಿದ್ದಾರೆ. ತಮ್ಮ ಅಪಾರ ಕಲಿಕಾಸಕ್ತಿಯಿಂದ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಕಳೆದ ವರ್ಷ, ಅಂದರೆ ತಮ್ಮ 74ನೇ ವಯಸ್ಸಿನಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (IGNOU) ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಿಂದ ಸಮಾಜ ಕಾರ್ಯದಲ್ಲಿ ಎಂಎ (MA in Social Work) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಇಗ್ನೋವಿನ ಅತ್ಯಂತ ಹಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಗೌರವ:

ಕೃಷ್ಣ ಕುಮಾರ್ ಗುಪ್ತಾ ಅವರ ಈ ಅಪರೂಪದ ಸಾಧನೆಯನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ (GBWR) ವಿಶ್ವ ದಾಖಲೆಯಾಗಿ ಗುರುತಿಸಿದೆ. “ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ (MA) ಪೂರ್ಣಗೊಳಿಸಿದ ಅತ್ಯಂತ ಹಿರಿಯ ವ್ಯಕ್ತಿ” ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಶಿಕ್ಷಣದ ಮೇಲಿನ ಅವರ ಸಮರ್ಪಣೆ ಮತ್ತು ನಿರಂತರ ಕಲಿಕಾಸಕ್ತಿಯನ್ನು ಮೆಚ್ಚಿ ಅವರಿಗೆ ವಿಶ್ವ ದಾಖಲೆಯ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ 75 ವರ್ಷದ ಗುಪ್ತಾ ಅವರು ಇತ್ತೀಚೆಗೆ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಿದ್ದಾರೆ.

ಎನ್‌ಎಸ್‌ಎಸ್‌ನ ಆರಂಭಿಕ ಸ್ವಯಂಸೇವಕ:

ರಾಷ್ಟ್ರೀಯ ಸೇವಾ ಯೋಜನೆ (NSS) ಆರಂಭವಾದ ದಿನಗಳಲ್ಲೇ ಸೇವೆ ಸಲ್ಲಿಸಿದ ಹೆಮ್ಮೆ ಕೃಷ್ಣ ಕುಮಾರ್ ಗುಪ್ತಾ ಅವರದ್ದು. ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ 1967-69ರ ಅವಧಿಯಲ್ಲಿ ಎನ್‌ಎಸ್‌ಎಸ್ ಪ್ರಥಮ ಬಾರಿಗೆ ಪ್ರಾರಂಭವಾದಾಗ, ಅವರು ಅದರ ಆರಂಭಿಕ ಸ್ವಯಂಸೇವಕರಾಗಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಮಹತ್ವದ ಕೊಡುಗೆಯನ್ನು ಸ್ಮರಿಸಿ, ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆಯು ಇತ್ತೀಚೆಗೆ ಅವರನ್ನು ವಿಶೇಷವಾಗಿ ಸನ್ಮಾನಿಸಿದೆ.

ಇದನ್ನೂ ಓದಿ: ಸತತ 3 ಬಾರಿ ಸೋಲು…4ನೇ ಪ್ರಯತ್ನದಲ್ಲಿ IAS ಕನಸು ನನಸು ಮಾಡಿಕೊಂಡ ನೇಹಾ ಬ್ಯಾಡ್ವಾಲ್: ಯಶಸ್ಸಿನ ಸೀಕ್ರೆಟ್ ಇಲ್ಲಿದೆ!

ಇಗ್ನೋಗೆ ಧನ್ಯವಾದ ಅರ್ಪಿಸಿದ ಸಾಧಕ:

ವಿಶ್ವ ದಾಖಲೆಯ ಗೌರವ ಪಡೆದ ನಂತರ ಮಾತನಾಡಿದ ಕೃಷ್ಣ ಕುಮಾರ್ ಗುಪ್ತಾ ಅವರು, ತಮಗೆ ಈ ವಯಸ್ಸಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಟ್ಟ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ (IGNOU) ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಗ್ನೋ ಸಂಸ್ಥೆಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ (Alumni) ಎನಿಸಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇಗ್ನೋ ಉಪಕುಲಪತಿಗಳಿಂದ ಶ್ಲಾಘನೆ:

ಇಗ್ನೋ ಉಪಕುಲಪತಿ (Vice Chancellor) ಪ್ರೊ. ಉಮಾ ಕಾಂಜಿಲಾಲ್ ಅವರು ಕೃಷ್ಣ ಕುಮಾರ್ ಗುಪ್ತಾ ಅವರನ್ನು ಆತ್ಮೀಯವಾಗಿ ಅಭಿನಂದಿಸಿದ್ದಾರೆ. “74ನೇ ವಯಸ್ಸಿನಲ್ಲಿ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ಅವರ ಜೀವನದ ಪ್ರಯಾಣ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಎನ್‌ಎಸ್‌ಎಸ್‌ನ ಆರಂಭಿಕ ದಿನಗಳಲ್ಲಿ ಅವರು ನೀಡಿದ ಕೊಡುಗೆ ಮತ್ತು ಇಂದಿನ ಅವರ ಸಾಧನೆ ಅನನ್ಯವಾದದ್ದು” ಎಂದು ಪ್ರೊ. ಉಮಾ ಕಾಂಜಿಲಾಲ್ ಕೊಂಡಾಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 am, Thu, 1 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More