ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಗಳಿಸಿರುವ ಅಥವಾ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಎರಡನೇ ಬಾರಿಯ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಯಲ್ಲಿ ಹಾಜರಾಗದೇ ಇರುವ ವಿದ್ಯಾರ್ಥಿಗಳಿಗೆ ಇನ್ನೂ ಒಂದು ಅವಕಾಶವಿದೆ. ಎಸ್‌ಎಸ್‌ಎಲ್‌ಸಿ 3 ನೇ ಪರೀಕ್ಷೆ ಜೂನ್ 23ರಿಂದ ಜೂನ್ 30ರ ವರೆಗೆ ನಡೆಯಲಿದ್ದು, ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಧೈರ್ಯದಿಂದ ಎದುರಿಸಿ ಉತ್ತಮ ಅಂಕವನ್ನು ಪಡೆಯಲು ಮಂಗಳೂರಿನ ಖಾಸಗಿ ಶಾಲೆಯೊಂದರ ಶಿಕ್ಷಕಿ ಪ್ರಿಯ ಬಂಗೇರ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ವಿವರಿಸಲಾಗಿದೆ.
ಪರೀಕ್ಷೆಯಲ್ಲಿ ಒಂದೆರಡು ಅಂಕ ಕಡಿಮೆ ಬಂದರೆ ಪೋಷಕರಿಗೆ ಹೆದರಿ ಅಥವಾ ಮನನೊಂದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು ಇದ್ದಾರೆ. ಆದ್ದರಿಂದ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಅಥವಾ ಫೇಲ್ ಆಗಿದ್ದೀನಿ ಎಂಬ ಚಿಂತೆ ಮರೆದು ಈ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ. ಉತ್ತಮ ಅಂಕ ಪಡೆಯುವುದೇ ನಿಮ್ಮ ಗುರಿಯಾಗಿರಲಿ. ಸಾಧ್ಯವಿಲ್ಲ ಅನ್ನೋ ಮನಸ್ಸು ತೊರೆದು “ಈ ಬಾರಿ ನಾನು ಗೆದ್ದೆ ಗೆಲ್ಲುವೆ” ಅನ್ನೋ ದೃಢ ನಿರ್ಧಾರದಿಂದ ಓದಲು ಶುರು ಮಾಡಿ.
ಪಠ್ಯಕ್ರಮವನ್ನು ಸ್ಪಷ್ಟವಾಗಿ ನೋಡಿ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಮತ್ತು ನೀವು ಈ ವರ್ಷ ಬರೆದ ಪ್ರಶ್ನೆಪತ್ರಿಕೆ ಗಳನ್ನು ಪರಿಶೀಲಿಸಿ, ಯಾವ ವಿಷಯಗಳಿಂದ ಹೆಚ್ಚು ಪ್ರಶ್ನೆಗಳು ಬರುತ್ತವೆ ಎಂದು ಗುರುತಿಸಿ. ಈಗಾಗಲೇ ಒಂದು ಸಲ ಪರೀಕ್ಷೆ ಬರೆದಿರುವುದರಿಂದ ನಿಮಗೆ ಇದರ ಸ್ವಲ್ಪ ತಿಳುವಳಿಕೆ ಇರುತ್ತದೆ. ನಿಮಗೆ ಕಷ್ಟವಾಗುವ ವಿಷಯಗಳಿಗೆ ಹೆಚ್ಚಿನ ಸಮಯ ನೀಡಿ.
ನಿಮಗೆ ಪರೀಕ್ಷೆಗೆ ತಯಾರಿ ನಡೆಸಲು ಹೆಚ್ಚು ಕಾಲಾವಕಾಶ ಇಲ್ಲದೇ ಇರುವುದರಿಂದ ಯಾವುದೇ ಕಷ್ಟವೆನಿಸುತ್ತದೆಯೋ ಅದನ್ನು ನಿಮ್ಮ ಶಿಕ್ಷಕರೊಂದಿಗೆ ದೈರ್ಯವಾಗಿ ಕೇಳಿ. ಇಲ್ಲದಿದ್ದರೆ ಈಗಾಗಲೇ ಹೆಚ್ಚು ಅಂಕ ಗಳಿಸಿರುವ ಸ್ನೇಹಿತರ ಜೊತೆ ಚರ್ಚೆ ಮಾಡಿ, ಅವರ ನೋಟ್ಸ್ ಪಡೆದುಕೊಳ್ಳಿ. ಸಂದೇಹಗಳಿದ್ದರೆ ಕೇಳಲು ಮುಜುಗರ ಮಾಡಬೇಡಿ ಏಕೆಂದರೆ ಉತ್ತಮ ಅಂಕ ಪಡೆಯಲು ನಿಮಗಿದು ಕೊನೆಯ ಅವಕಾಶ.
ಇನ್ನೂ ಕೇವಲ ಇಪ್ಪತ್ತು ದಿನಗಳು ಉಳಿದಿರುವುದರಿಂದ ಎಲ್ಲಾ ವಿಷಯಗಳನ್ನು ಓದಿ ಮುಗಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದ ಮುಖ್ಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಉದಾಹರಣೆಗೆ ವ್ಯಾಖ್ಯಾನ, ಸೂತ್ರಗಳು, ರೇಖಾಚಿತ್ರಗಳು ಹಾಗೂ ಒಂದು ಅಂಕದ ಉತ್ತರಗಳಿಗೆ ಆದ್ಯತೆ ನೀಡಿ. ಯಾಕೆಂದರೆ ಯಾವುದೇ ಉತ್ತರಗಳಲ್ಲಿ ಮುಖ್ಯ ವ್ಯಕ್ತಿಯ ವ್ಯಾಖ್ಯಾನ ಅಥವಾ ಅದಕ್ಕೆ ಸಂಬಂಧಿಸಿದ ಸೂತ್ರ, ರೇಖಾಚಿತ್ರಗಳನ್ನು ಉಲ್ಲೇಖಿಸಿದರೆ ಹೆಚ್ಚಿನ ಅಂಕ ಸಿಗುವುದಂತೂ ಖಂಡಿತಾ.
ಕೆಲವೊಮ್ಮೆ ಓದಿರುವುದು ಮರೆತು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಿವಿಷನ್ ಅತ್ಯಂತ ಅಗತ್ಯ. ಅದಕ್ಕಾಗಿ ದಿನದ ಕೊನೆಯಲ್ಲಿ ಎಷ್ಟು ಓದಿರುತ್ತಿರೋ ಅದನ್ನು ರಿವಿಷನ್ ಮಾಡಿ. ರಿವಿಷನ್ಗೆಂದೇ ಒಂದು ಚಿಕ್ಕ ನೋಟ್ಸ್ ಪುಸ್ತಕ ತೆಗೆದಿಟ್ಟುಕೊಳ್ಳಿ.
ಇದನ್ನೂ ಓದಿ: ಸಮಾಜ ವಿಜ್ಞಾನದಲ್ಲಿ ಫೇಲ್ ಆದ ಟಾಪರ್; ಮರುಮೌಲ್ಯಮಾಪನದ ಬಳಿಕ ಬಂತು 96 ಅಂಕ
ಇನ್ನೂ ಕೇವಲ 20ರಿಂದ 22 ದಿನಗಳು ಉಳಿದಿರುವುದರಿಂದ ಎಲ್ಲಾ ವಿಷಯಗಳನ್ನು ಓದಿ ಮುಗಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದ ಭಯ ಬೇಡ. ನಿಮ್ಮ ಮಾಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. 6-7 ಗಂಟೆಗಳ ನಿದ್ರೆ, ಸಮತೋಲನ ಆಹಾರ, ವ್ಯಾಯಾಮ ಮಾಡಿ. ಇದು ನಿಮ್ಮ ಕೊನೆಯ ಪ್ರಯತ್ನವಾದ್ದರಿಂದ ಕಷ್ಟವೆನಿಸಿದರೂ ಪರೀಕ್ಷೆ ಮುಗಿಯುವ ವರೆಗೆ ಸೋಶಿಯಲ್ ಮೀಡಿಯಾದಿಂದ ದೂರವಿರಿ. ಧೈರ್ಯ, ಆತ್ಮವಿಶ್ವಾಸ ಮತ್ತು 15ರಿಂದ 20 ನಿಮಿಷ ಧ್ಯಾನ ಮಾಡಿ.
ಇವೆಲ್ಲಾವುಗಳ ಜೊತೆಗೆ ಈ ಹಿಂದೆ ನೀವು ಮಾಡಿದ ತಪ್ಪುಗಳನ್ನು ಮರೆದು ರಿಲ್ಯಾಕ್ಸ್ ಆಗಿರಿ. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಲಿ. ಅರ್ಧಗಂಟೆ ಮೊದಲೇ ಎಕ್ಸಾಮ್ ಹಾಲ್‌ನಲ್ಲಿರಿ. ಪರೀಕ್ಷೆ ಮುಗಿದ ಮೇಲೆ ನಿಮ್ಮ ಪ್ರಶ್ನೆ ಸಂಖ್ಯೆ ಸರಿಯಾಗಿ ಹಾಕಿದ್ದೀರಾ ಎಂದು ಗಮಸಿನಿ ಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕೂಲಂಕಶವಾಗಿ ಎಲ್ಲವನ್ನೂ ಪರಿಶೀಲಿಸಿ ಅವಸರ ಬೇಡ.
ಶಿಕ್ಷಣ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ