ಪಾಲಿಟೆಕ್ನಿಕ್​​ಗಳಲ್ಲಿ ಪ್ರತಿ ಕೋರ್ಸ್​​ನಲ್ಲೂ ಎರಡು ಸೀಟ್​​​ಗಳನ್ನು ಕಾಯ್ದಿರಿಸಬೇಕು ಎಂದ ಎಐಸಿಟಿಇ; ಯಾರಿಗಾಗಿ ಮೀಸಲು?-ಇಲ್ಲಿದೆ ಮಾಹಿತಿ

| Updated By: Lakshmi Hegde

Updated on: Mar 30, 2022 | 9:37 AM

ಕೊವಿಡ್​ 19ನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್​​​ ನಿಧಿ ಯೋಜನೆಯಡಿ ನೆರವು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 2021ರ ಮೇ ತಿಂಗಳಲ್ಲಿ ಘೋಷಿಸಿದ್ದರು.

ಪಾಲಿಟೆಕ್ನಿಕ್​​ಗಳಲ್ಲಿ ಪ್ರತಿ ಕೋರ್ಸ್​​ನಲ್ಲೂ ಎರಡು ಸೀಟ್​​​ಗಳನ್ನು ಕಾಯ್ದಿರಿಸಬೇಕು ಎಂದ ಎಐಸಿಟಿಇ; ಯಾರಿಗಾಗಿ ಮೀಸಲು?-ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(All India Council for Technical Education (AICTE)ಯೊಂದಿಗೆ ಸಂಯೋಜನೆಗೊಂಡಿರುವ ಎಲ್ಲ ಪಾಲಿಟೆಕ್ನಿಕ್​(ತಾಂತ್ರಿಕ ಡಿಪ್ಲೋಮಾ ಕೋರ್ಸ್​ಗಳು) ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ಕೋರ್ಸ್​​ನಲ್ಲೂ ಎರಡು ಸೀಟ್​​ಗಳನ್ನು ಕಾಯ್ದಿರಿಸಬೇಕಾಗುತ್ತದೆ. ಕೊವಿಡ್​ 19 ಸಾಂಕ್ರಾಮಿಕದಿಂದ ಪಾಲಕರು, ಕುಟುಂಬದವರನ್ನು ಕಳೆದುಕೊಂಡು ಅನಾಥರಾಗಿ ಪಿಎಂ ಕೇರ್ಸ್ (PM CARES) ನಿಧಿ ಯೋಜನೆಯ ಫಲಾನುಭವಿಗಳಾದವರಿಗೆ ಈ ಸೀಟು ಮೀಸಲಾಗಿರುತ್ತದೆ. 2022-23ನೇ ಶೈಕ್ಷಣಿಕ ವರ್ಷದಿಂದಲೇ ಇದು ಅನ್ವಯ ಎಂದು ಎಐಸಿಟಿಇ ತಿಳಿಸಿದೆ.

ಎಐಸಿಟಿಇ 2022-23ನೇ ಸಾಲಿನ ಪರಿಷ್ಕೃತ ಅನುಮೋದನಾ ಆದೇಶಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದು ಅದರಲ್ಲಿ ಈ ವಿಚಾರವನ್ನು ತಿಳಿಸಿದೆ. ಕೊವಿಡ್​ 19ನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್​​​ ನಿಧಿ ಯೋಜನೆಯಡಿ ನೆರವು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 2021ರ ಮೇ ತಿಂಗಳಲ್ಲಿ ಘೋಷಿಸಿದ್ದರು. ಅದರಂತೆ ಎಐಸಿಟಿಇ ಕೂಡ ಸಹಾಯ ಹಸ್ತ ಚಾಚಿದೆ. ಹೀಗೆ ಪಾಲಿಟೆಕ್ನಿಕ್​ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರತಿ ಕೋರ್ಸ್​​ನಲ್ಲೂ ಎರಡು ಸೀಟು ಕಾಯ್ದಿರಿಸುವುದರಿಂದ ಉಳಿದ ಅರ್ಜಿದಾರ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಕೊವಿಡ್​ 19ನಿಂದ ಅನಾಥರಾದ ಮಕ್ಕಳ ಸಂಖ್ಯೆ 4302 (ಮಾರ್ಚ್​ 16ರವರೆಗೆ) ಎಂದು ಪಿಎಂ ಕೇರ್ಸ್​ ನಿಧಿಯಡಿ ದಾಖಲಾದ ಅಂಕಿಸಂಖ್ಯೆಗಳಿಂದ ಸ್ಪಷ್ಟವಾಗಿದೆ.  ಈ ಎಲ್ಲ ಮಕ್ಕಳೂ ಖಂಡಿತ ತಾಂತ್ರಿಕ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳಲಾರರು. ಹಾಗಿದ್ದಾಗ್ಯೂ  ನಾವು ಎಲ್ಲ ಪಾಲಿಟೆಕ್ನಿಕ್​​ಗಳಲ್ಲಿ ಪ್ರತಿಕೋರ್ಸ್​ಗಳಲ್ಲಿ ಎರಡು ಸೀಟ್ ಕಾಯ್ದಿರಿಸುತ್ತೇವೆ ಎಂದು ಎಐಸಿಟಿಇ ಹೇಳಿದೆ. ಪಿಎಂ ಕೇರ್ಸ್​​ ಯೋಜನೆಯ ಸರ್ಟಿಫಿಕೆಟ್​ ಹೊಂದಿರುವ ಮಕ್ಕಳು ಈ ವಿಶೇಷ ಕೋಟಾದಡಿ ಪಾಲಿಟೆಕ್ನಿಕ್​ ಶಿಕ್ಷಣಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದೂ ಹೇಳಿದೆ.

ಈ ಯೋಜನೆ 18 ವರ್ಷ ಒಳಗಿನವರಿಗೆ ಮಾತ್ರ ಅನ್ವಯ. ಕೊವಿಡ್​ 19 ಸಾಂಕ್ರಾಮಿಕದಿಂದ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಅಥವಾ ಅವರನ್ನು ಸಾಕುತ್ತಿದ್ದ ಯಾರಾದರೂ ಸರಿ ಅವರನ್ನು ಕಳೆದುಕೊಂಡು ಅನಾಥರಾದ ಮಕ್ಕಳು ಯೋಜನೆಯಡಿ ಫಲಾನುಭವಿಗಳು ಆಗಿರುತ್ತಾರೆ. ಇದೀಗ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ಕಾಯ್ದಿರಿಸಲಾದ ಸೀಟ್​​ಗಳು ಮುಂದೆ ವಿದ್ಯಾರ್ಥಿಗಳು ದೊಡ್ಡವರಾಗಿ, ಅವರಿಗೆ ಕೋರ್ಸ್​ಗೆ ಸೇರುವಷ್ಟು ವಯಸ್ಸಾಗುವವರೆಗೂ ಮಾನ್ಯವಾಗಿಯೇ ಇರುತ್ತದೆ ಎಂದೂ ಹೇಳಲಾಗಿದೆ. ದೇಶದಲ್ಲಿ ಸುಮಾರು 3591 ಅನುಮೋದಿತ ಪಾಲಿಟೆಕ್ನಿಕ್​ಗಳು  ಇವೆ.

ಇದನ್ನೂ ಓದಿ:  ಆರ್ಕಿಟೆಕ್ಚರ್​, ಫ್ಯಾಷನ್​ ಟೆಕ್ನಾಲಜಿ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಇನ್ನು ಪಿಸಿಎಂ ಕಡ್ಡಾಯವಲ್ಲ: ಎಐಸಿಟಿಇ

Published On - 8:43 am, Wed, 30 March 22