
ದೇಶಾದ್ಯಂತ ಹೆಣ್ಣುಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಅಜೀಂ ಪ್ರೇಮ್‌ಜಿ ಫೌಂಡೇಶನ್’ ಬೃಹತ್ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ. 2026ನೇ ಸಾಲಿನ ಈ ವಿದ್ಯಾರ್ಥಿವೇತನಕ್ಕಾಗಿ ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಹ ಬಾಲಕಿಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಹೆಣ್ಣುಮಕ್ಕಳು ತಮ್ಮ ಪದವಿ ಶಿಕ್ಷಣವನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಲು ಈ ನೆರವು ಸಹಕಾರಿಯಾಗಲಿದೆ.
ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಶಾಲೆ ಅಥವಾ ಕಾಲೇಜಿನಲ್ಲಿ ನಿಯಮಿತ (Regular) ವಿದ್ಯಾರ್ಥಿಯಾಗಿ 10ನೇ ಮತ್ತು 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. 12ನೇ ತರಗತಿಯ ನಂತರ ಭಾರತದ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ (Degree) ಅಥವಾ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಬಾಲಕಿಯರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಕಳೆದ 6 ತಿಂಗಳೊಳಗೆ ತೆಗೆದ ಬಣ್ಣದ ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರ (ಸೆಲ್ಫಿ ಅಥವಾ ಫಿಲ್ಟರ್ ಇರುವ ಫೋಟೋಗಳಿಗೆ ಅವಕಾಶವಿಲ್ಲ) ಹಾಗೂ ಹೆಸರು, ಜನ್ಮ ದಿನಾಂಕ ಸ್ಪಷ್ಟವಾಗಿ ಕಾಣಿಸುವ ಆಧಾರ್ ಕಾರ್ಡ್ ಸಾಫ್ಟ್ ಕಾಪಿಯನ್ನು ಹೊಂದಿರಬೇಕು. ಇದರೊಂದಿಗೆ 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ ಹಾಗೂ ಕಾಲೇಜು ಪ್ರವೇಶವನ್ನು ದೃಢೀಕರಿಸುವ ಬೋನಾಫೈಡ್ ಪ್ರಮಾಣಪತ್ರ (Bonafide Certificate) ಅಥವಾ ಶುಲ್ಕದ ರಶೀದಿಯನ್ನು ಸಲ್ಲಿಸಬೇಕಾಗುತ್ತದೆ.
ಆಸಕ್ತರು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್ azimpremjifoundation.org ಗೆ ಭೇಟಿ ನೀಡಿ, ಮುಖಪುಟದಲ್ಲಿ ಲಭ್ಯವಿರುವ ‘Registration’ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಕೊನೆಯಲ್ಲಿ ಅರ್ಜಿ ಸಲ್ಲಿಸಿ (Submit), ದೃಢೀಕರಣ ಪ್ರತಿಯನ್ನು (Confirmation page) ಡೌನ್‌ಲೋಡ್ ಮಾಡಿಕೊಳ್ಳಬೇಕು.
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ 30,000ರೂ. ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಬಾಲಕಿಯರು ಆಗಸ್ಟ್ 31 ರೊಳಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ