ಗೋಕರ್ಣ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪೋಷಕರಲ್ಲಿ ಗೊಂದಲ ಇದೆ. 20 ಸಾವಿರ ಶಾಲೆಯಲ್ಲಿ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾರಂಭ ಮಾಡುತ್ತಿದ್ದೇವೆ. ಉಳಿದ ಶಾಲೆಗಳಲ್ಲಿ ಈ ಹಿಂದಿನಂತೆಯೇ ನಡೆಯಲಿದೆ. ನಮ್ಮಲ್ಲಿ 48,000 ಶಾಲೆಗಳಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇದೆ. ಎಲ್ಲಿ ಮಕ್ಕಳು ಹೆಚ್ಚು ಇರುತ್ತಾರೋ ಅಲ್ಲಿ ಪ್ರಾರಂಭಿಸುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (ಮಾರ್ಚ್ 19) ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ ಕೆಲ ಮದರಸಾಗಳನ್ನು ಶಿಕ್ಷಣ ಪದ್ಧತಿಗೆ ತರಲು ಪ್ರಯತ್ನ ಮಾಡುತ್ತೇವೆ ಎಂದೂ ಈ ವೇಳೆ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರವಾಗಿ ಅವರು ಮಾತನಾಡಿದ್ದಾರೆ. ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಬಗ್ಗೆ ಅರಿವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ನೈತಿಕ ಶಿಕ್ಷಣದ ಪಾಠ ಮಾಡ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂದು ಸಲಹೆ ಪಡೆಯುತ್ತೇವೆ. ಶಿಕ್ಷಣ ತಜ್ಞರ ಸಲಹೆ ಪಡೆದು ನಿರ್ಧಾರ ಮಾಡುತ್ತೇವೆ ಎಂದು ಗೋಕರ್ಣದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಪಠ್ಯದಲ್ಲಿ ಭಗವದ್ಗೀತೆ (Bhagavad Gita) ಅಳವಡಿಸುವುದು ನಮ್ಮ ಧ್ಯೇಯವಾಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕೆಂದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ನಲ್ಲಿ ಹೇಳಿಕೆ ನೀಡಿದ್ದಾರೆ. ನಿನ್ನೆ ಗುಜರಾತ್ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದ್ದಾರೆ. ಈ ಕುರಿತು ನಮ್ಮ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ವಿವರ ಪಡೆದ ನಂತರ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅರ್ಧ ವಿಚಾರ ಇಟ್ಟುಕೊಂಡು ಚರ್ಚೆ ಮಾಡಿದರೆ ಅದು ತಪ್ಪು- ಆರಗ ಜ್ಞಾನೇಂದ್ರ
ಈಗಾಗಲೇ ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಕ್ಷಣಕ್ಕೆ ಈ ಬಗ್ಗೆ ಏನೂ ಮಾಡುವುದಿಲ್ಲ. ಈ ಕುರಿತು ಪೂರ್ಣ ಪ್ರಮಾಣದ ಚರ್ಚೆ ನಡೆಸುವ ಅಗತ್ಯವಿದೆ. ಅರ್ಧ ವಿಚಾರ ಇಟ್ಟುಕೊಂಡು ಚರ್ಚೆ ಮಾಡಿದರೆ ಅದು ತಪ್ಪು ಅಂತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸ್ತೇನೆ; ನೈತಿಕ ವಿಚಾರ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ: ಸಿದ್ದರಾಮಯ್ಯ
ಇದನ್ನೂ ಓದಿ: ಭಗವದ್ಗೀತೆಯಂತೆ ಕುರಾನ್ ಬಗ್ಗೆ ಚಿಂತನೆ ಮಾಡುತ್ತಾರಾ?; ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸಿಎಫ್ಐ ವಿರೋಧ!
Published On - 3:47 pm, Sat, 19 March 22