ಬೆಂಗಳೂರು: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ (Board exams) ನಡೆಸುವ ಬಗ್ಗೆ ಹೊರಡಿಸಿದ್ದ ಸುತ್ತೋಲೆ ರದ್ದು ಹಿನ್ನಲೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ (High Court Of Karnataka), ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದೆ. ಸುತ್ತೋಲೆ ರದ್ದುಪಡಿಸಿದ ಆದೇಶಕ್ಕೆ ತಡೆ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ವಾದ ಆಲಿಸಿದ ಪೀಠ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ನಾಳೆಗೆ (ಮಾರ್ಚ್ 15) ಮುಂದೂಡಿತು.
5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಹಿನ್ನಲೆ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಕಾರವೆತ್ತಿ ಮಾರ್ಚ್ 14ಕ್ಕೆ ವಿಚಾರಣೆ ಮುಂದೂಡಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮಾರ್ಚ್ 13ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡುವುದಾಗಿ ಸರ್ಕಾರ ತಿಳಿಸಿದೆ. ಈ ಶೈಕ್ಷಣಿಕ ವರ್ಷದಿಂದ 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ವಾರ್ಷಿಕ ಪರೀಕ್ಷೆ ವಿರೋಧಿಸಿ ಪೋಷಕರ ಸಂಘಟನೆ ಕೋರ್ಟ್ ಮೊರೆ ಹೋಗಿದ್ದು, ಬೋರ್ಡ್ ಪರೀಕ್ಷೆಗೆ ತಡೆ ನೀಡುವ ಮೂಲಕ ಹೈಕೋರ್ಟ್ ಶಿಕ್ಷಣ ಇಲಾಖೆಗೆ ಬಿಗ್ ಶಾಕ್ ನೀಡಿತ್ತು.
ಇದನ್ನೂ ಓದಿ: ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್
ಈ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ನಿರ್ಧರಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪಬ್ಲಿಕ್ ಪರೀಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. 2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 12 ಡಿಸೆಂಬರ್ 2022 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ರುಪ್ಸಾ ತಕರಾರು ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಮಧ್ಯಂತ ತಡೆ ನೀಡಲು ನಿರಾಕರಿಸಿತ್ತು. ಬಳಿಕ ರುಪ್ಸಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಸಕ್ತ ಶೈಕ್ಷಣಿಕ ಸಾಲಿನ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಸೂಚಿಸಿದೆ. ಈ ಹಿನ್ನೆಲೆ ಏಕಸದಸ್ಯ ಪೀಠ ಮಾ. 10 ರಂದು ತೀರ್ಪು ನೀಡಿತ್ತು.
ಇನ್ನು, ಸಿಬಿಎಸ್ಸಿ ಕೇಂದ್ರದ ಪಠ್ಯಕ್ರಮದ ಶಾಲೆಗಳಲ್ಲಿಯೂ ಇಲ್ಲದ ವಾರ್ಷಿಕ ಪರೀಕ್ಷೆ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವುದಕ್ಕೆ ಈ ಹಿಂದೆಯೂ ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಇಲಾಖೆಯು ವಾರ್ಷಿಕ ಪರೀಕ್ಷೆಗಳ ಹೆಸರಲ್ಲಿ ದುಡ್ಡು ಮಾಡುವ ಹುನ್ನಾರ ನಡೆಸುತ್ತಿದೆ ಎಂಬ ಆರೋಪಗಳು ಸಹ ಕೇಳಿಬಂದಿದ್ದವು. ಪರೀಕ್ಷೆಗಳು ಕೋಟ್ಯಾಂತರ ರೂಪಾಯಿ ಲೂಟಿಯ ಹಾದಿ ಎಂದು ಆರೋಪಿಸಿ ಪೋಷಕರ ಸಂಘಟನೆಗಳು ವಾರ್ಷಿಕ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ