SSLC Exams 2023: ಕಲಬುರಗಿಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟ 16 ಪರೀಕ್ಷಾ ಸಿಬ್ಬಂದಿ ಅಮಾನತ್ತು

|

Updated on: Apr 06, 2023 | 8:17 AM

ಕಲಬುರಗಿಯಲ್ಲಿ ಎಸ್​ಎಸ್​ಎಲ್​ಸಿ ಬೋರ್ಡ್ ಪರೀಕ್ಷೆ ವೇಳೆ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟ 16 ಪರೀಕ್ಷಾ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.

SSLC Exams 2023: ಕಲಬುರಗಿಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟ 16 ಪರೀಕ್ಷಾ ಸಿಬ್ಬಂದಿ ಅಮಾನತ್ತು
ಅಫಜಲಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ
Follow us on

ಕಲಬುರಗಿ: ರಾಜ್ಯಾದ್ಯಂತ ಎಸ್​ಎಸ್​ಎಲ್​ಸಿ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದು ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟ ಪರೀಕ್ಷಾ ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಕಲಬುರಗಿ ಅಪರ ಪ್ರಾದೇಶಿಕ ಆಯುಕ್ತ ಈನಂದ ಪ್ರಕಾಶ್ ಆದೇಶ ಹೊರಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೊಬ್ಬುರು (ಬಿ)ಪರೀಕ್ಷಾ ಕೇಂದ್ರದಲ್ಲಿ ಏಪ್ರಿಲ್ 3ರಂದು ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದೆ. ನಕಲು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ 15 ಮಂದಿ ಕೊಠಡಿಯ ಮೇಲ್ವಿಚಾರಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಸೋಮವಾರ ಅಮಾನತುಗೊಳಿಸಿದ್ದಾರೆ.

ಕರ್ತವ್ಯದಲ್ಲಿದ್ದ ಪರೀಕ್ಷಾ ಸಿಬ್ಬಂದಿ, ಮೇಲ್ವಿಚಾರಕರು ಗಣಿತ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಟ್ಟು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಹೆಚ್ಚುವರಿ ಆಯುಕ್ತರು ಪ್ರಕಾಶ್ ಮೀನಾ ತಿಳಿಸಿದ್ದಾರೆ. ಪರೀಕ್ಷೆಗೆ ದಿಢೀರ್ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸಲ್ಲಿಸಿದ ವರದಿ ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.

ಇಶಾ ಪಂತ್ ಭೇಟಿ ಕೊಟ್ಟಾಗ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಿದ್ದಾರೆ. ಆಗ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿರುವ ತೆರೆದ ಮೈದಾನದಲ್ಲಿ ಪರೀಕ್ಷೆ ಬರೆಯುತ್ತಿರುವುದು ಕಂಡುಬಂದಿದೆ. ಪ್ರಶ್ನೆಗಳಿಗೆ ಉತ್ತರಿಸಲು ಬುಕ್‌ಲೆಟ್‌ಗಳನ್ನು ಬಳಸಿ ಸಾಮೂಹಿಕ ನಕಲು ಮಾಡಿದ್ದು ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಇಶಾ ಪಂತ್ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಮುಖ್ಯಶಿಕ್ಷಕ ಗೋಳಾಲ್ಲಪ್ಪ ಗುರಪ್ಪ ಮತ್ತು 15 ಸಹಾಯಕ ಶಿಕ್ಷಕರಾದ ಭೀಮಾಶಂಕರ ಮಡಿವಾಳ, ರವೀಂದ್ರ, ದೇವೇಂದ್ರಪ್ಪ ಯರಗಲ್, ಸವಿತಾ ಬಾಯಿ ಜಮಾದಾರ್, ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಪರ್ವೀನ್ ಸುಲ್ತಾನ, ಬಾಬು ಪವಾರ್, ಕವಿತಾ, ಜಯಶ್ರೀ, ವಿದ್ಯಾವತಿ, ಗಾಯತ್ರಿ ಬಿರಾದಾರ್, ಮೀನಾಕ್ಷಿ ಮತ್ತು ಅರುಣಕುಮಾರ ಎಂಬುವವರನ್ನು ಅಮಾನತ್ತುಗೊಳಿಸಲಾಗಿದೆ.

ಇದನ್ನೂ ಓದಿ: SSLC Exams 2023: ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಾರ್ಚ್​ 31ರಿಂದ SSLC ಪರೀಕ್ಷೆ ಶುರುವಾಗಿದ್ದು, ಏಪ್ರಿಲ್ 15ಕ್ಕೆ ಮುಗಿಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:45ರವರೆಗೆ ಪರೀಕ್ಷೆ ನಡೆಯುತ್ತಿದ್ದು, 8 ಲಕ್ಷದ 42 ಸಾವಿರದ 811 ವಿದ್ಯಾರ್ಥಿಗಳು ಎಕ್ಸಾಂ ಎದುರಿಸುತ್ತಿದ್ದಾರೆ. ಎಕ್ಸಾಂ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. 200 ಮೀಟರ್ ನಿಷೇದಾಜ್ಞೆ ಜಾರಿಯಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ KSRTC ಹಾಗೂ BMTC ಬಸ್​​​ನಲ್ಲಿ ಉಚಿತ ಪ್ರಯಾಣ ಇರಲಿದೆ.

ಈ ವರುಷವೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ 10 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಭಾಷಾ ಹಾಗೂ ಕೋರ್ ಸೇರಿ ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ನೀಡಲಿದ್ದು, ತೇರ್ಗಡೆ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯ ಆಗಲಿದೆ. ಇನ್ನೂ SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಅವಕಾಶ ಇರಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯ ಆಗಿದೆ.

ಕಲಬುರಗಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:47 am, Thu, 6 April 23