ರಾಜ್ಯದಲ್ಲಿವೆ 6,675 ಏಕೋಪಾಧ್ಯಾಯ ಶಾಲೆಗಳು, 188 ಸ್ಕೂಲ್​​ಗಳಲ್ಲಿ ಶೂನ್ಯ ದಾಖಲಾತಿ

ರಾಜ್ಯದ 6 ಸಾವಿರಕ್ಕೂ ಹೆಚ್ಚಿನ ಸಂಖ್ಯೆ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಈ ಶಿಕ್ಷಕರು ಎಲ್ಲ ಮಕ್ಕಳನ್ನೂ ಒಂದೇ ತರಗತಿಯಲ್ಲಿ ಸೇರಿಸಿ ಪಾಠ ಮಾಡುವುದರ ಹೊರತು ಅವರಿಗೆ ಬೇರೆ ಆಯ್ಕೆಯಿಲ್ಲ. ಆದರೆ, ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟದ ಮೇಲೆ ಪ್ರಭಾವ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ರಾಜ್ಯದಲ್ಲಿವೆ 6,675 ಏಕೋಪಾಧ್ಯಾಯ ಶಾಲೆಗಳು, 188 ಸ್ಕೂಲ್​​ಗಳಲ್ಲಿ ಶೂನ್ಯ ದಾಖಲಾತಿ
ಸರ್ಕಾರಿ ಶಾಲೆ

Updated on: Dec 25, 2025 | 2:52 PM

ಬೆಂಗಳೂರು, ಡಿಸೆಂಬರ್​​ 25: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಇಂತಹ ಶಾಲೆಗಳ ಸಂಖ್ಯೆ ಸುಮಾರು 1,200ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. 2024–25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 5,412 ಏಕ ಶಿಕ್ಷಕ ಶಾಲೆಗಳಿದ್ದರೆ, ಈ ಬಾರಿ ಆ ಸಂಖ್ಯೆ 6,675ಕ್ಕೆ ಏರಿಕೆಯಾಗಿದೆ. ಅಂದರೆ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 1,263 ಹೆಚ್ಚಳವಾಗಿವೆ.

ರಾಜ್ಯದಲ್ಲಿ ಸುಮಾರು 49,000 ಸರ್ಕಾರಿ ಶಾಲೆಗಳಿದ್ದು, ಅಂಕಿ ಅಂಶಗಳ ಪ್ರಕಾರ ಏಕ-ಶಿಕ್ಷಕ ಶಾಲೆಗಳ ಸಂಖ್ಯೆ ಹಾಸನದಲ್ಲಿಯೇ ಹೆಚ್ಚಾಗಿವೆ. ನಂತರದ ಸ್ಥಾನವನ್ನು ತುಮಕೂರು ಪಡೆದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು, ಇದು ಕಳೆದ ವರ್ಷ ನೇಮಕಗೊಂಡ ಅತಿಥಿ ಶಿಕ್ಷಕರಿಗಿಂತ ಹೆಚ್ಚು ಎಂದು ಈಗಾಗಲೇ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ; ಉಡುಪಿ-ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್​​

ಏಕ-ಶಿಕ್ಷಕ ಶಾಲೆಗಳ ಪೈಕಿ ಕೆಲವೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 30ಕ್ಕಿಂತ ಹೆಚ್ಚಿದ್ದು, ಇವುಗಳಲ್ಲಿ ಬಹುಪಾಲು ಪ್ರಾಥಮಿಕ ಶಾಲೆಗಳಾಗಿವೆ. ಈ ಶಿಕ್ಷಕರು 1ರಿಂದ 5ನೇ ತರಗತಿಗಳವರೆಗೆ ಪಾಠ ಮಾಡಬೇಕಾಗಿರುವುದರಿಂದ, ಎಲ್ಲ ಮಕ್ಕಳನ್ನೂ ಒಂದೇ ತರಗತಿಯಲ್ಲಿ ಸೇರಿಸಿ ಪಾಠ ಮಾಡುವುದರ ಹೊರತು ಅವರಿಗೆ ಬೇರೆ ಆಯ್ಕೆಯಿಲ್ಲ. ಆದರೆ ಒಬ್ಬ ಶಿಕ್ಷಕನಿಗೆ ಎಲ್ಲ ತರಗತಿಗಳನ್ನು ನಿರ್ವಹಿಸುವುದು ಅಸಾಧ್ಯ. ಇದು ಮಕ್ಕಳ ಕಲಿಕೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅತಿ ಹೆಚ್ಚು ಏಕ-ಶಿಕ್ಷಕ ಶಾಲೆಗಳಿರುವ ಜಿಲ್ಲೆಗಳು

  • ಹಾಸನ – 586
  • ತುಮಕೂರು – 426
  • ಕೋಲಾರ – 347
  • ಚಿಕ್ಕಬಳ್ಳಾಪುರ – 334

ಅತಿ ಕಡಿಮೆ ಏಕ-ಶಿಕ್ಷಕ ಶಾಲೆಗಳಿರುವ ಜಿಲ್ಲೆಗಳು

  • ಧಾರವಾಡ – 26
  • ಬೆಂಗಳೂರು ಉತ್ತರ – 39
  • ವಿಜಯನಗರ – 45
  • ಗದಗ – 46

188 ಶಾಲೆಗಳಲ್ಲಿ ಶೂನ್ಯ ದಾಖಲಾತಿ!

ವಿಧಾನಪರಿಷತ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ಪ್ರವೇಶವಾಗಿಲ್ಲ. ಇದರಲ್ಲಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 3 ಪ್ರೌಢಶಾಲೆಗಳಿವೆ. ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳು ತುಮಕೂರಿನಲ್ಲಿ 45 ಇದ್ದು, ನಂತರ ಕಲಬುರಗಿ 21, ಕೋಲಾರ 20, ಕೊಪ್ಪಳ 18 ಮತ್ತು ಬೀದರ್​​ನಲ್ಲಿ 17 ಇವೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.