ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜೆಇಇ, ನೀಟ್, ಸಿಇಟಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ ಆರಂಭಿಸಲು ಗಂಭೀರ ಆಲೋಚನೆ ನಡೆದಿದೆ.
ಅಲ್ಲದೆ, ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜುಗಳ ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ವಿಶೇಷ ಕ್ರೀಡಾ ತರಬೇತಿ, ಕೆಲ ಉಚಿತ ಆರೋಗ್ಯ ಸೌಲಭ್ಯಗಳನ್ನು ಆರಂಭಿಸಲು ಕೂಡ ಚರ್ಚೆಗಳು ನಡೆದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ 31 ಕೋಟಿ ರೂ ವೆಚ್ಚದಲ್ಲಿ ಈ ವರ್ಷವೇ ಕ್ರಿಯಾ ಯೋಜನೆ ರೂಪಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವ ಚರ್ಚೆಗಳು ನಡೆದಿವೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟಚಿತ್ರಣ ದೊರೆಯಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಚಿತ ತರಬೇತಿ ಹೇಗೆ ನಡೆಯಲಿದೆ?
ಡಿಸೆಂಬರ್ ವೇಳೆಗೆ ಕ್ರಿಯಾ ಯೋಜನೆಗೆ ಸರ್ಕಾರದ ಅನುಮತಿ ಪಡೆದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭಿಸುವ ಲೆಕ್ಕಾಚಾರ ಇಲಾಖೆಯದ್ದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕಾಲೇಜಿನ ಸಮೀಪದ ಕಟ್ಟಡಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಿಂದ ತರಬೇತಿ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಹಾಲಿ ಇರುವ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿರುವ ಅಥವಾ ಹೊಸ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಬೋಧಕರಿಗೆ ನಿರ್ದಿಷ್ಟ ಗೌರವಧನವನ್ನೂ ನೀಡಲು ಉದ್ದೇಶಿಸಲಾಗಿದೆ.
ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ದಾಖಲಾತಿ ಕುಸಿಯುವ ಭೀತಿ
ಪಿಯುಸಿ ವ್ಯಾಸಾಂಗ ಮಾಡುವ ವೇಳೆಯೇ ಕಾಲೇಜುಗಳಲ್ಲಿ ಸಾಮಾನ್ಯ ತರಗತಿಯ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೊಡಲಾಗುತ್ತೆ. ದಾಖಲಾತಿ ವೇಳೆಯೇ ಕೋಚಿಂಗ್ ಕ್ಲಾಸ್ ನೆಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತದೆ. ಇದು ಅನೇಕ ಬಡ ವಿದ್ಯಾರ್ಥಿಗಳ ಪಾಲಿಗೆ ಕೈಗೆಟುಕುವ ವೃತ್ತಿಪರ ಕೋರ್ಸ್ಗಳಾಗಿ ಮಾರ್ಪಾಡು ಮಾಡುತ್ತೆ. ಶಾಲಾ ಕಾಲೇಜುಗಳಲ್ಲಿ ಕೋಚಿಂಗ್ ಕ್ಲಾಸ್ ನಡೆಸಬಾರದು ಅನ್ನೊ ಆದೇಶವಿದ್ದರೂ, ಎಗ್ಗಿಲ್ಲದೆ ನಡೆಯುತ್ತಿದೆ. ಇದು ಕಾನೂನು ಬಾಹಿರ ಕೂಡ. ಸದ್ಯ ಸರ್ಕಾರದ ಹಂತದಲ್ಲಿ ಈ ಉಚಿತ ತರಬೇತಿ ಆರಂಭವಾದರೆ, ಖಾಸಗಿ ಕೋಚಿಂಗ್ ಕ್ಲಾಸ್ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯೊ ಭೀತಿ ಆವರಿಸಿದೆ.
ಇನ್ನೂ ಶಿಕ್ಷಣ ಕಲ್ಯಾಣ ನಿಧಿಗೆ ವಾಪಸ್ ಬಂದಿರುವ ತೆರಿಗೆ ರೂಪದ ಹಣವೂ ಸೇರಿ ಒಟ್ಟು 31 ಕೋಟಿ ರೂ. ವೆಚ್ಚದಲ್ಲಿ ಇಲಾಖೆಯು ಸರ್ಕಾರಿ ಶಾಲಾ, ಕಾಲೇಜು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಕ್ರೀಡೆ ಮತ್ತಿತರ ವಿಭಾಗದಲ್ಲಿ ಕೆಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚೆ ನಡೆಸಲಾಗುತ್ತಿದೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಂಶವನ್ನೂ ಸೇರಿಸಲಾಗುತ್ತಿದೆ. ಇಲಾಖಾ ಸಚಿವರ ಮಾರ್ಗದರ್ಶನದಲ್ಲಿ ಕ್ರಿಯಾಯೋಜನೆ ರೂಪಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದೆಂದು ತಿಳಿಸಿದ್ದಾರೆ.
ವರದಿ- ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು
Published On - 7:49 pm, Fri, 4 November 22