ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ 11 ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಅಧಿಕೃತ ಆದೇಶವನ್ನೂ ನೀಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಆದೇಶ ಹೊರಡಿಸಿದ್ದು, ಸಂಧ್ಯಾ ಶಕ್ತಿ ಯೋಜನೆಯಡಿ 11 ಹೊಸ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜುಗಳ ಪ್ರಾರಂಭ ಮಾಡಲಾಗುತ್ತಿದ್ದು, 2021-22ನೇ ಸಾಲಿನ ಅಯವ್ಯಯ ಭಾಷಣದ ಘೋಷಣೆಯಂತೆ ಈ ಯೋಜನೆಗೆ ಮುನ್ನುಡಿ ಹಾಡಲಾಗಿದೆ. ಕಾಲೇಜುಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯ ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಹಾಗೂ ಉತ್ತಮ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಕಲ್ಪಿಸುವ ಬಿ.ಕಾಂ ಮತ್ತು ಬಿಸಿಎ ಕೋರ್ಸ್ಗಳಿಗಷ್ಟೇ ಹೆಚ್ಚುವರಿ ಸಂಜೆ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಹೆಚ್ಚುವರಿ ಸಂಜೆ ಕಾಲೇಜುಗಳ ವ್ಯಾಸಂಗಕ್ಕೆ ಸರ್ಕಾರ ಅವಕಾಶ ನೀಡಿದ ಕಾರಣ ರಾಜ್ಯದ ಒಟ್ಟು 11 ನಗರ ಪಾಲಿಕೆಯಲ್ಲಿ ತಲಾ ಒಂದು ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಆರಂಭವಾಗಲಿದ್ದು, ಹೊಸದಾಗಿ ಆರಂಭವಾಗುತ್ತಿರುವ ಸಂಜೆ ಕಾಲೇಜುಗಳ ಪಟ್ಟಿ ಹೀಗಿದೆ:
1. ಸರ್ಕಾರಿ ಆರ್.ಸಿ ಕಾಲೇಜು, ಬೆಂಗಳೂರು
2. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬೆಳಗಾವಿ
3. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆ ತುಮಕೂರು
4. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪು ನಗರ ಮೈಸೂರು
5. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ
6. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಸಿಸಿ ಬ್ಲಾಕ್ ದಾವಣಗೆರೆ
7. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
8. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಾರೇಶ್ವರನಗರ, ಧಾರವಾಡ
9. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಬಾಗ್ ಖಾಜಾ ಕಾಲೋನಿ, ಬಿಜಾಪುರ
10. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂ ರಸ್ತೆ, ಗುಲ್ಬರ್ಗಾ
11. ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ
ಇದನ್ನೂ ಓದಿ:
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪ್ಯಾಡ್; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕ್ರಾಂತಿ: ಬಸವರಾಜ ಬೊಮ್ಮಾಯಿ
(Karnataka state government announces 11 First grade evening colleges in Karnataka)