ಬೆಂಗಳೂರು: ನಾಳೆಯಿಂದ (ಫೆಬ್ರವರಿ 21, ಸೋಮವಾರ) ಪಿಯು ಕಾಲೇಜುಗಳಲ್ಲಿ (PU Colleges) ಪ್ರಾಯೋಗಿಕ ಪರೀಕ್ಷೆ (Preparatory Exams) ಆರಂಭವಾಗಲಿದೆ. ಕರ್ನಾಟಕ ರಾಜ್ಯದ ಬಹುತೇಕ ಪಿಯು ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಪಿಯು ಬೋರ್ಡ್ ಈಗಾಗಲೇ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ (Exam Timetable) ಪರೀಕ್ಷೆ ನಡೆಯಲಿದೆ. ಹಿಜಾಬ್ ವಿವಾದದಿಂದ (Hijab Controversy) ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಹಿಜಾಬ್ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.
ಹಿಜಾಬ್ ವಿವಾದದ ನಡುವೆಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಹಿಜಾಬ್ ಸಂಘರ್ಷದಿಂದ ಪದವಿ ಕಾಲೇಜು ರಜೆ ಹಿನ್ನಲೆ ಮೂರು ದಿನ ತಡವಾಗಿ ಪರೀಕ್ಷೆ ಆರಂಭ ಆಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಮುಗಿಸಲು ಮಾರ್ಚ್ 25ರ ವರೆಗೂ ಪದವಿ ಪೂರ್ವ ಮಂಡಳಿ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಹಿಜಾಬ್ ವಿವಾದ ಬಹಳಷ್ಟು ಸಮಸ್ಯೆ ಉಂಟುಮಾಡಿದೆ. ಹಲವು ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಈ ಹಿನ್ನೆಲೆ, ಪರೀಕ್ಚೆಗೆ ಹಾಜರಾಗದಿದ್ದರೆ ಮತ್ತೆ ಸಮಸ್ಯೆ ಉಂಟಾಗಲಿದೆ.
ಪಾಠ ಪ್ರವಚನ ಮುಗಿದಿಲ್ಲ; ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ
ಈ ಮಧ್ಯೆ, ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳ ವಿಸಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ಜಿ.ಕುಮಾರ್ ನಾಯಕ್ ಈ ಬಗ್ಗೆ ಸೂಚನೆ ನೀಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿವಿಗಳ ಸೆಮಿಸ್ಟರ್ ಪರೀಕ್ಷೆ 1 ತಿಂಗಳ ಕಾಲ ಮುಂದೂಡಿ ಎಂದು ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ತಿಳಿಸಿದ್ದಾರೆ. ಕೊರೊನಾ ಸೋಂಕು, ಒಮಿಕ್ರಾನ್ ಸೋಂಕು ಹೆಚ್ಚಳ, ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪಾಠ ಪ್ರವಚನ ಮುಗಿದಿಲ್ಲ ಈ ಕಾರಣದಿಂದ ಹೀಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಷ್ಟೇ ಅಲ್ಲದೆ ಕೊರೊನಾ ಬಳಿಕ ಇದೀಗ ಹಿಜಾಬ್ ವಿವಾದ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯಾದಂತ ಮೂರು ದಿನಗಳ ಕಾಲ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆ ಬಳಿಕ, ಇದೀಗ ಕಾಲೇಜು ಮತ್ತೆ ಆರಂಭವಾಗಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತೆ ಮೊದಲಿನಂತೆ ಆರಂಭವಾಗಿಲ್ಲ.
ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದ ಉಪನ್ಯಾಸಕಿ ರಾಜೀನಾಮೆ
Published On - 8:38 am, Sun, 20 February 22