ಬೆಂಗಳೂರು, ಜುಲೈ 23: ದೇಶದಲ್ಲಿ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳಲ್ಲಿ (Anganwadi Centers) ಎಲ್‌ಕೆಜಿ ಹಾಗೂ ಯುಕೆಜಿ ಕರ್ನಾಟಕ ಸರ್ಕಾರ (Karnataka Government) ಆರಂಭಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ 1975 ರಲ್ಲಿ ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಮೊದಲ ಬಾರಿಗೆ ಅಗಂನವಾಡಿಗಳು ಆರಂಭವಾಗಿದ್ದವು. ಕರ್ನಾಟಕದ ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಸೋಮವಾರ ಬೆಂಗಳೂರಿನಲ್ಲಿನ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು.
ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪಟ್ಟೇಗಾರಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಚಾಲನೆ ನೀಡಿದರು.
ಹೈಟೇಕ್ ತರಗತಿಗಳು ಕೊಠಡಿಗಳು, ಮಕ್ಕಳಿಗೆ ಉಚಿತ ಸಮವಸ್ತ್ರ, ಕಲಿಕೆಗೆ ಬೇಕಾದ ಸಮಾಗ್ರಿಗಳು, ಬ್ಯಾಗ್, ಪುಸ್ತಕ ವಿತರಣೆ, ಮಕ್ಕಳಿಗೆ ಗುಣಮಟ್ಟದ ಆಹಾರ, ಉತ್ತಮ ಶೌಚಾಲಯ ವ್ಯವಸ್ಥೆ, ಮಕ್ಕಳನ್ನ ನೋಡಿಕೊಳ್ಳಲು ವಿಶೇಷ ಸಹಾಯಕರು, ಶಾಲೆಯಲ್ಲಿ ಪಠ್ಯೇತರ ಚಟುವಟಿಗೆ ಬೇಕಾದ ಸಮಾಗ್ರಿಗಳ ವ್ಯವಸ್ಥೆ, ಕಲಿಕಾ ಪೂರಕ ಆಟದ ವಸ್ತುಗಳು ಇರಲಿವೆ.
ರಾಜ್ಯದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಕೂಡ ಮಾಡಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಮನವಿಗೆ ಮಣಿದ ಸರ್ಕಾರ, ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸಿದೆ.
ಬೆಂಗಳೂರಿನ ಪಟ್ಟೇಗಾರಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದರು.
ಇದನ್ನೂ ಓದಿ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಮುಂದಾದ ಸರ್ಕಾರ: ಮಾಹಿತಿ ನೀಡಲು ಜು 31 ಕೊನೆ ದಿನ
ಈಗ ದೇಶದಲ್ಲಿಯೇ ಮೊದಲ ಬಾರಿಗೆ ಅಂಗನವಾಡಿಯಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಿದ್ದು ನನ್ನ ಭಾಗ್ಯವಾಗಿದೆ. ಸಾಂಕೇತಿಗವಾಗಿ 250 ಅಂಗನವಾಡಿಯಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಲಾಗಿದೆ. ಪೌಷ್ಠಿಕ ಆಹಾರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರಮುಖವಾಗಿದೆ. ಆಧುನಿಕ ಯುಗದಲ್ಲಿ ಮಾರ್ಡನ್ ಶಿಕ್ಷಣ ನೀಡುವುದು ನಮ್ಮ ಇಲಾಖೆ ಹಾಗೂ ಸರ್ಕಾರದ ಗುರಿಯಾಗಿದೆ. ಮುಂದಿನ ಹಂತದಲ್ಲಿ ರಾಜ್ಯದಲ್ಲಿ 18 ಸಾವಿರ ಅಂಗನವಾಡಿಯಲ್ಲಿ LKG ಮತ್ತು UKG ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ 10 ಕೋಟಿ ಅನುದಾನದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ನಡುವೆ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಕಿಯರಿಗೆ ಕಡ್ಡಾಯ ಪಿಯುಸಿ ಶಿಕ್ಷಣವಾಗಿರಬೇಕಾದ ಮಾನದಂಡ ಇರುವುದರಿಂದ ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಪರ್ಯಾಯವಾಗಿ ಈ ಶಿಕ್ಷಕಿಯರಿಗೆ ತರಬೇತಿ ನೀಡಲಾಗುವುದು. ಜೊತೆಗೆ 30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Tue, 23 July 24