ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ: ಸಮಿತಿ ರಚಿಸಿ ವರದಿ ಪಡೆಯಲು ಆದೇಶ ಹೊರಡಿಸಿದ ಸರ್ಕಾರ

|

Updated on: Mar 18, 2023 | 8:41 PM

ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ ವಿಚಾರವಾಗಿ ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆಯಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ: ಸಮಿತಿ ರಚಿಸಿ ವರದಿ ಪಡೆಯಲು ಆದೇಶ ಹೊರಡಿಸಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
Image Credit source: asianetnews.com
Follow us on

ಬೆಂಗಳೂರು: ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ (Meditation) ಮತ್ತು ನೈತಿಕ ಶಿಕ್ಷಣ ವಿಚಾರವಾಗಿ ಡಾ. ಗುರುರಾಜ ಕರ್ಜಗಿ (Dr. Gururaja Karjagi) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆಯಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ತಜ್ಞರಿಂದ ಮಾಹಿತಿ ಪಡೆದು ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಸರ್ಕಾರದಿಂದ ಆರು ಶಿಕ್ಷಣ ತಜ್ಞರನ್ನು ಸಮಿತಿ ಒಳಗೊಂಡಿದ್ದು, ಸರ್ಕಾರಕ್ಕೆ ವರದಿ ನೀಡಲು ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ  ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೆಲ ತಿಂಗಳ ಹಿಂದೆ ಸುತ್ತೋಲೆಯಲ್ಲಿ ತಿಳಿಸಿದ್ದರು.

ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ

ಧ್ಯಾನದ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಈಗಾಗಲೇ ಧ್ಯಾನವನ್ನು ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೋರಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Meditation: ಕರ್ನಾಟಕದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಡ್ಡಾಯ ಧ್ಯಾನ; ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ

ವಿದ್ಯಾರ್ಥಿಗಳಿಗೆ ಪ್ರತಿದಿನ ನಿಯಮಿತವಾಗಿ ಧ್ಯಾನ ಮಾಡಿಸುವುದು ಸೂಕ್ತವಾಗಿರುತ್ತದೆ. ರಾಜ್ಯದಲ್ಲಿನ ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಅವರು ಸುತ್ತೋಲೆಯಲ್ಲಿ ಹೇಳಿದ್ದರು.

ಇದು ಯೋಗ, ಪ್ರಾಣಾಯಾಮವನ್ನು ಒಳಗೊಂಡಿರುತ್ತದೆಯೇ ಅಥವಾ ಕೇವಲ ಧ್ಯಾನ ಮಾತ್ರವೇ ಎನ್ನುವ ಬಗ್ಗೆ ಸುತ್ತೋಲೆಯಲ್ಲಿ ಸ್ಪಷ್ಟ ಸೂಚನೆ ಇಲ್ಲ. ಬಹುಶಃ ಇದನ್ನು ಸ್ಥಳೀಯ ಮಟ್ಟದಲ್ಲಿ ನಿರ್ಧರಿಸಬಹುದು ಎಂದು ಹೇಳಲಾಗಿತ್ತು. ಧ್ಯಾನದಲ್ಲಿ ಹಲವು ರೀತಿಗಳಿದ್ದು ಶಿಕ್ಷಣ ಸಚಿವರು ಯಾವ ರೀತಿಯ ಧ್ಯಾನದ ಬಗ್ಗೆ ಹೇಳುತ್ತಿದ್ದಾರೆ ಎನ್ನುವ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಭೋದನೆಗೆ ಸರ್ಕಾರ ಚಿಂತನೆ

ಭಗವದ್ಗೀತೆ ಭೋದನೆ ಶಿಕ್ಷಣ ಇಲಾಖೆ ಚಿಂತನೆ 

ಇನ್ನು ಅದೇ ರೀತಿಯಾಗಿ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು ಎಂಬ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನೆಲೆ ಸರ್ಕಾರ ಈಗಾಗಲೇ ಭಗವದ್ಗೀತೆಯ ಭೋಧನೆಗೆ ಸಂಬಂಧ ಸಮಿತಿ ರಚನೆ ಮಾಡಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಯಾವ ತರಗತಿಯಿಂದ ಯಾವ ತರಗತಿಗಳಿಗೆ ಯಾವ ಮಾದರಿಯಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು? ಯಾವ ರೀತಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು ಅಂತಾ ಸಮಿತಿ ಮಾಹಿತಿ ನೀಡಲಿದೆ.

ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಮಕ್ಕಳಿಗೆ ಗೀತೆ ಭೋದನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಗುಜರಾತ್ ಹಾಗೂ ಬನಾರಸ್ ವಿವಿ ಮಾಡಲ್ ಫಾಲೋ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಗುಜರಾತ್ ಸರ್ಕಾರ ಪಠ್ಯದಲ್ಲಿ ತಂದಿರುವ ಭಗ್ವತಗೀತಾ ಮಾದರಿಯಲ್ಲಿಯೇ ರಾಜ್ಯದಲ್ಲೂ ಫಾಲೊ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.