NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ!

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾಡಿರುವ ಯಡವಟ್ಟಿನಿಂದಾಗಿ ನಾಗ್ಪುರದ 18 ವರ್ಷದ ನೀಟ್ ಅಭ್ಯರ್ಥಿಯೊಬ್ಬನಿಗೆ ಭಾರತದಿಂದ 2,500 ಕಿಲೋಮೀಟರ್ ದೂರವಿರುವ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದೆ! ಪಾಸ್‌ಪೋರ್ಟ್ ಕೂಡ ಇಲ್ಲದ ವಿದ್ಯಾರ್ಥಿಗೆ ವಿದೇಶಿ ಕೇಂದ್ರ ಸಿಕ್ಕಿರುವುದು ಇಡೀ ಕುಟುಂಬವನ್ನು ಆತಂಕಕ್ಕೆ ಈಡು ಮಾಡಿದೆ.

NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ!
ಸಾಂದರ್ಭಿಕ ಚಿತ್ರ
Image Credit source: PTI

Updated on: Jun 20, 2026 | 11:10 AM

ಮುಂಬೈ, ಜೂನ್ 20: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) ಮರುಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ನಿವಾಸಿಯಾದ 18 ವರ್ಷದ ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ಎನ್‌ಟಿಎ ಜೂನ್ 14 ರಂದು ಜನರೇಟ್ ಮಾಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿಯ ‘ಅಬುಧಾಬಿ ಇಂಡಿಯನ್ ಸ್ಕೂಲ್’ ಅನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಿದೆ! ತನಗಿಷ್ಟ ಬಂದ ಮೂರು ಸ್ಥಳೀಯ ಜಿಲ್ಲಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆ 2,500 ಕಿ.ಮೀ ದೂರದ ವಿದೇಶಿ ಕೇಂದ್ರ ಸಿಕ್ಕಿರುವುದು ಇಡೀ ಕುಟುಂಬಕ್ಕೆ ಆಘಾತ ನೀಡಿದೆ.

ಮುಖ್ಯಾಂಶಗಳು

  • ಪಾಸ್‌ಪೋರ್ಟ್ ಇಲ್ಲದ ವಿದ್ಯಾರ್ಥಿಗೆ ವಿದೇಶಿ ಕೇಂದ್ರ
  • ಹಾಲ್ ಟಿಕೆಟ್ ಕಂಡು ಕಂಗಾಲಾದ ಕುಟುಂಬ
  • ಎನ್‌ಟಿಎ ತಾಂತ್ರಿಕ ಲೋಪಕ್ಕೆ ವ್ಯಾಪಕ ಆಕ್ರೋಶ

ಪಾಸ್‌ಪೋರ್ಟ್ ಇಲ್ಲದೆ ವಿಮಾನ ಟಿಕೆಟ್‌ಗೆ ಹುಡುಕಾಟ

ಸಾಮಾನ್ಯವಾಗಿ ಅನಿವಾಸಿ ಭಾರತೀಯರು (NRI) ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಎನ್‌ಟಿಎ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡುತ್ತದೆ. ಆದರೆ ಸ್ಥಳೀಯ ವಿದ್ಯಾರ್ಥಿ ಅಬ್ದುಲ್ಲಾಗೆ ಅಬುಧಾಬಿ ಕೇಂದ್ರ ಸಿಕ್ಕಿರುವುದರಿಂದ ಪೋಷಕರು ತಕ್ಷಣವೇ ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ತಪ್ಪು ಸರಿಪಡಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಇರುವವರೆಗೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅನಿವಾರ್ಯ ಪರಿಸ್ಥಿತಿ ಬಂದರೆ ವಿದೇಶಕ್ಕಾದರೂ ಕಳುಹಿಸೋಣ ಎಂದು ತುರ್ತು ಪಾಸ್‌ಪೋರ್ಟ್ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್‌ಗಳ ವ್ಯವಸ್ಥೆ ಮಾಡಲು ಓಡಾಡುವಂತಾಯಿತು. ಈಗಾಗಲೇ ನೀಟ್ ಪೇಪರ್ ಲೀಕ್ ಪ್ರಕರಣದಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಅಬ್ದುಲ್ಲಾಗೆ ಈ ಹಾಲ್ ಟಿಕೆಟ್ ಯಡವಟ್ಟು ಮತ್ತಷ್ಟು ಆಘಾತ ನೀಡಿದೆ.

ಕೇಂದ್ರಗಳ ಬದಲಾವಣೆಯಿಂದ ಪೋಷಕರು ಕಷ್ಟಕ್ಕೆ

ಕಳೆದ ತಿಂಗಳು ನೀಟ್ ಪರೀಕ್ಷೆ ರದ್ದಾದ ನಂತರ ಎನ್‌ಟಿಎ ಪೋಷಕರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, ಹಳೆಯ ಕೇಂದ್ರವನ್ನೇ ಉಳಿಸಿಕೊಳ್ಳುತ್ತೀರಾ ಅಥವಾ ಹೊಸ ಕೇಂದ್ರ ಬೇಕೇ ಎಂದು ಕೇಳಿತ್ತು. ಆದರೆ ನಾಗ್ಪುರ ವ್ಯಾಪ್ತಿಯಲ್ಲೇ ಹಳೆಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ಹಲವು ವಿದ್ಯಾರ್ಥಿಗಳಿಗೆ ಈಗ ಹೊಸ ಹಾಲ್ ಟಿಕೆಟ್‌ನಲ್ಲಿ ದೂರದ ಜಿಲ್ಲೆಗಳ ಮತ್ತು ಗ್ರಾಮಾಂತರ ಪ್ರದೇಶಗಳ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಪೋಷಕರು ಕೇಳದಿದ್ದರೂ ಕೇಂದ್ರಗಳನ್ನು ಬದಲಾಯಿಸಿರುವುದು ಮತ್ತು ಪರೀಕ್ಷಾ ಶುಲ್ಕದ ಮರುಪಾವತಿಗೆ ಬ್ಯಾಂಕ್ ವಿವರಗಳನ್ನು ಪಡೆದು ಗೊಂದಲ ಸೃಷ್ಟಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನೀಟ್ ಮರು ಪರೀಕ್ಷೆಗೂ ಮುನ್ನ ‘ಟೆಲಿಗ್ರಾಮ್’ ನಿಷೇಧ ಮುಂದುವರಿಕೆ: ಕೇಂದ್ರದ ನಿರ್ಧಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಡೇಟಾಬೇಸ್ ಅಪ್ಡೇಟ್ ಮಾಡುವಾಗ ಉಂಟಾಗಿರುವ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದ್ದು, ಸದ್ಯ ಅಧಿಕಾರಿಗಳು ವಿದ್ಯಾರ್ಥಿಗೆ ನಾಗ್ಪುರದಲ್ಲೇ ಹೊಸ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶಿಕ್ಷಣ ಸಂಬಂಧಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Sat, 20 June 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us