NEET-UG: ನೀಟ್ ಯುಜಿ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿಯ ಮಾನದಂಡ ರದ್ದುಗೊಳಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ

| Updated By: ರಶ್ಮಿ ಕಲ್ಲಕಟ್ಟ

Updated on: Mar 09, 2022 | 10:04 PM

ಈ ಮೊದಲು ನೀಟ್ ಯುಜಿ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ಇತ್ತು

NEET-UG: ನೀಟ್ ಯುಜಿ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿಯ ಮಾನದಂಡ ರದ್ದುಗೊಳಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು ನೀಟ್ -ಯುಜಿ (NEET-UG) ಪರೀಕ್ಷೆ ಬರೆಯಲು ಗರಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದೆ. ಹಿಂದಿನ ದಿನ ನಡೆದ ಸಭೆಯ ನಂತರ ಸುತ್ತೋಲೆ ಮೂಲಕ ಈ ಘೋಷಣೆ ಮಾಡಲಾಗಿದೆ. ಈ ಮೊದಲು ನೀಟ್ ಯುಜಿ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ಇತ್ತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಗೆ ಬರೆದ ಪತ್ರದಲ್ಲಿ ಎನ್‌ಎಂಸಿ ಕಾರ್ಯದರ್ಶಿ ಡಾ ಪುಲ್ಕೇಶ್ ಕುಮಾರ್ ಅವರು ಎನ್‌ಇಇಟಿ-ಯುಜಿಯ ಮಾಹಿತಿ ಬುಲೆಟಿನ್‌ನಿಂದ ಗರಿಷ್ಠ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವಂತೆ ಏಜೆನ್ಸಿಯನ್ನು ಕೇಳಿದ್ದಾರೆ.  “21ನೇ ಅಕ್ಟೋಬರ್, 2021 ರಂದು ನಡೆದ 4 ನೇ ಎನ್ಎಂಸಿ ಸಭೆಯಲ್ಲಿ ನೀಟ್  ಯುಜಿ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಯಾವುದೇ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಹೊಂದಿರಬಾರದು ಎಂದು ನಿರ್ಧರಿಸಲಾಗಿದೆ ಎಂದು ನಾನು ತಿಳಿಸಲು ಬಯಸುತ್ತೇನೆ. ಆದ್ದರಿಂದ, ಮಾಹಿತಿ ಬುಲೆಟಿನ್ ಅನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸಬಹುದು ಎಂದು ಅಧಿಕೃತ ಸೂಚನೆಯಲ್ಲಿ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, “ರಾಷ್ಟ್ರೀಯ ವೈದ್ಯಕೀಯ ಆಯೋಗವು NEET-UG ಪರೀಕ್ಷೆಯಲ್ಲಿ ಬರೆಯಲು ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಈ ನಿರ್ಧಾರವು ಮಹತ್ವಾಕಾಂಕ್ಷಿ ವೈದ್ಯರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೆಲವು ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನೀಟ್ ಭಾರತದಲ್ಲಿನ ಏಕೈಕ ಪ್ರವೇಶ ಪರೀಕ್ಷೆಯಾಗಿದೆ. ಪ್ರತಿ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಇದಕ್ಕೆ ಹಾಜರಾಗುತ್ತಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ನೀಟ್ 2022 ಕ್ಕೆ ದಿನಾಂಕ ಮತ್ತು ಸಮಯವನ್ನು ಎನ್ ಟಿಎ ಇನ್ನೂ ಪ್ರಕಟಿಸಿಲ್ಲ.

2021 ರಿಂದ ಬಿಎಸ್​​ಸಿ ನರ್ಸಿಂಗ್ ಮತ್ತು ಬಿಎಸ್​​ಸಿ ಆರೋಗ್ಯ ವಿಜ್ಞಾನ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಯನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವಿನ ಹಿನ್ನೆಲೆ ನೀಟ್ ವಿರುದ್ಧ ಸಮರ ಸಾರಿದ ಜೆಡಿಎಸ್: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

Published On - 9:43 pm, Wed, 9 March 22