ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು: 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ

ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಪೋಷಕರಲ್ಲಿ ಆತಂಕ ಸೃಷ್ಟಿಸುವಂತಹ ವಿಚಾರವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೇರಿ ಖಾಯಂ ಶಿಕ್ಷಕರ ಕೊರತೆಯೂ ಗುಣಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗುತ್ತಿದೆ. ಆದರೆ ಸರ್ಕಾರ ಮಾತ್ರ ಖಾಯಂ ಶಿಕ್ಷಕರ ನೇಮಕಾತಿಯನ್ನು ಗಂಭೀರವಾಗಿ ಪರಿಗಣಿಸದೆ ಅತಿಥಿ ಶಿಕ್ಷಕರ ನೇಮಕಾತಿಯತ್ತ ಗಮನ ಹರಿಸಿದ್ದು, ವಿಧ್ಯಾರ್ಥಿಗಳು ಹಾಗೂ ಪೋಷಕರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು: 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ
ಸಾಂದರ್ಭಿಕ ಚಿತ್ರ

Updated on: Oct 14, 2025 | 6:52 AM

ಬೆಂಗಳೂರು, ಅಕ್ಟೋಬರ್ 14: ಕರ್ನಾಟಕದ (Karnataka) ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣ ಇಲಾಖೆ ದತ್ತಾಂಶಗಳ ಪ್ರಕಾರ ಬರೋಬ್ಬರಿ 61,525 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹೀಗಾಗಿ ರಾಜ್ಯ ಸರ್ಕಾರವು ಅನುದಾನಿತ ಶಾಲೆಗಳಿಗೆ 6,000 ಅತಿಥಿ ಶಿಕ್ಷಕರು, ಸರ್ಕಾರಿ ಶಾಲೆಗಳಿಗೆ 12,000 ಶಿಕ್ಷಕರು ಸೇರಿದಂತೆ 18,000 ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುಳಿವು ನೀಡಿದ್ದಾರೆ. ಆದರೆ ಸರ್ಕಾರಿ ಶಾಲೆಗಳಿಗೆ ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಸರ್ಕಾರದ ನಡೆ ವಿಧ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಬೇಸರ ತರಿಸಿದೆ.

ಐದು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ!

ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇರುವುದರಿಂದ ಬುನಾದಿ ಹಂತದ ಕಲಿಕೆಯಲ್ಲಿಯೂ ಮಕ್ಕಳು ಹಿಂದುಳಿಯುತ್ತಿದ್ದಾರೆ. 5,539 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲಾಗದೆ ಸರ್ಕಾರಿ ಶಾಲೆಗಳ ಫಲಿತಾಂಶ ಕುಸಿಯುತ್ತಿದೆ. ಈ ಮಧ್ಯೆ ಅತಿಥಿ ಶಿಕ್ಷಕರ ಮೇಲೆ ವಿಧ್ಯಾರ್ಥಿಗಳು ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಅತಿಥಿ ಶಿಕ್ಷಕರೂ ಕನಿಷ್ಠ ಗೌರವಧನ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಚಾರವಾಗಿ ವಿಧ್ಯಾರ್ಥಿ ಸಂಘಟನೆಗಳು ಅಸಮಾಧಾನ ಹೊರಹಾಕಿದ್ದು, ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿ ಬದಲಾಗಿ ಖಾಯಂ ಶಿಕ್ಷಕರ ನಿಯೋಜನೆ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಪರೀಕ್ಷಾ ಶುಲ್ಕ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಒಂದೆಡೆ, ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಡುವ ಸರ್ಕಾರ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮಾತ್ರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಗುರಿ ನೀಡುವ ಸರ್ಕಾರ ಬೋಧಕ ಸಿಬ್ಬಂದಿ ಕೊರತೆ ನೀಗಿಸುವ ಕೆಲಸಕ್ಕೆ ಮುಂದಾಗಿಲ್ಲ. ಸದ್ಯ ಕೊನೆಗೂ 18 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದು, ಆದಷ್ಟು ಬೇಗ ಅದು ಅನುಷ್ಠಾನಕ್ಕೆ ಬರಲಿ ಎಂದು ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಆಗ್ರಹಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ