Pariksha Pe Charcha: ಜ.27ರಂದು ಮಕ್ಕಳೊಂದಿಗೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ; ಪಾಲಕರು ಕೂಡ ಭಾಗಿಯಾಗುವಂತೆ ಬಿಸಿ ನಾಗೇಶ್ ಮನವಿ

| Updated By: ವಿವೇಕ ಬಿರಾದಾರ

Updated on: Jan 18, 2023 | 11:33 AM

PM Narendra Modi: ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ ನಡೆಸಲಿದ್ದಾರೆ.

Pariksha Pe Charcha: ಜ.27ರಂದು ಮಕ್ಕಳೊಂದಿಗೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ; ಪಾಲಕರು ಕೂಡ ಭಾಗಿಯಾಗುವಂತೆ ಬಿಸಿ ನಾಗೇಶ್ ಮನವಿ
ಬಿಸಿ ನಾಗೇಶ್​, ಪ್ರಧಾನಿ ಮೋದಿ
Follow us on

ಬೆಂಗಳೂರು: ಬರುವ ಫೆಬ್ರವರಿ-ಮಾರ್ಚದಿಂದ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿದ್ಯಾರ್ಥಿಗಳೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಪರೀಕ್ಷಾ ಪೇ ಚರ್ಚಾ (Pariksha Pe Charcha) ನಡೆಸಲು ತೀರ್ಮಾನಿಸಿದ್ದಾರೆ. ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಇದೇ ಜನವರಿ 27 ರಂದು ನಡೆಯುವುದರಿಂದ ರಾಜ್ಯದ ಹೆಚ್ಚಿನ ಸಂಖ್ಯೆಯ ಮಕ್ಕಳು ಈ ಚರ್ಚೆಯಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ ಸೂಚಿಸಿದ್ದಾರೆ.

ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದರು. ಈ ವೇಳೆ ಪರೀಕ್ಷಾ ಪೇ ಚರ್ಚಾ ವೀಕ್ಷಣೆಗೆ ಸಂಬಂಧಪಟ್ಟಂತೆ ಶಾಲೆಗಳಲ್ಲಿನ ಸಿದ್ದತೆಯನ್ನು ಪರೀಕ್ಷಿಸಿದರು.

ಬಳಿಕ ಮಾತನಾಡಿದ ಅವರು ಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರಬಂದು ಆಸಕ್ತಿಯಿಂದ, ಖುಷಿಯಿಂದ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಈ ಪರೀಕ್ಷಾ ಪೇ ಚರ್ಚಾ ಆಯೋಜಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಮಕ್ಕಳು ಇದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಜನವರಿ 27ರಂದು ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಪರೀಕ್ಷಾ ಪೇ ಚರ್ಚಾ ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳು ಪ್ರಧಾನಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಮಕ್ಕಳು ಮತ್ತು ಪಾಲಕರು ಆನ್​ಲೈನ್​ ಮೂಲಕ, ಪತ್ರಗಳ ಮೂಲಕ ಕೇಳಿರುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿದ್ದಾರೆ. ಇದರಿಂದ ಮಕ್ಕಳು ದೈರ್ಯದಿಂದ, ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ಈ ಹಿನ್ನೆಲೆ ಪ್ರಧಾನಿಯವರಿಗೆ ಪ್ರಶ್ನೆ ಕೇಳಲು www.mygov.in/ppc-2023/  ವೆಬ್​ಸೈಟ್​ಗೆ ಭೇಟಿ ನೀಡಿ. ಇನ್ನು ಪರೀಕ್ಷಾ ಪೇ ಚರ್ಚಾ ವೀಕ್ಷಿಸಲು ಶಾಲೆಗಳಲ್ಲಿ ಸ್ಕ್ರೀನ್​ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ್ಳೊಂದಿಗೆ ಪಾಲಕರು ಕೂಡ ಕಾರ್ಯಕ್ರಮದಲ್ಲಿ ಕೂರಬೇಕೆಂದು ಮನವಿ ಮಾಡಿಕೊಂಡರು.

ಇನ್ನು ಪರೀಕ್ಷೆ ಸಮಯದಲ್ಲಿ ಮಕ್ಕಳಷ್ಟೇ ಅಲ್ಲದೇ ಪಾಲಕರು ಅಥವಾ ಪೋಷಕರು, ಶಿಕ್ಷಕರು ಕೂಡ ಆತಂಕಕ್ಕೆ ಒಳಗಾಗುತ್ತಿದ್ದು, ಇದನ್ನು ನಿವಾರಿಸಲು ಪರೀಕ್ಷಾ ಪೇ ಚರ್ಚಾ ಅನುಕೂಲವಾಗಲಿದೆ. ಹಾಗೇ ಕೆಲವೊಂದು ಸಾರಿ ಚೆನ್ನಾಗಿ ಓದಿಕೊಂಡಿರುವ ಮಕ್ಕಳೇ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ವಿಫಲರಾಗುತ್ತಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ ಎಂದು ಸಚಿವ ಬಿಸಿ ನಾಗೇಶ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ